ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದಲ್ಲಿ ಕ್ರಿಮಿನಲ್ ಮೊಕದ್ದಮೆ: ಪುತ್ತೂರು ನಗರಸಭಾ ಪೌರಾಯುಕ್ತರ ಎಚ್ಚರಿಕೆ

Update: 2019-06-14 14:49 GMT

ಪುತ್ತೂರು: ನಗರ ಸಭಾ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ದ ಯಾವುದೇ ನಿರ್ದಾಕ್ಷಿಣ್ಯವಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ನಗದ ಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಎಚ್ಚರಿಸಿದ್ದಾರೆ. 

ನಗರಸಭೆಯ ಪೌರಕಾರ್ಮಿಕರು ನಗರ ಸ್ವಚ್ಚತಾ ಕಾರ್ಯ ನಡೆಸುತ್ತಿದ್ದು, ಸ್ವಚ್ಚಗೊಳಿಸಿದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ತ್ಯಾಜ್ಯಗಳನ್ನು ತಂದು ಎಸೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ತ್ಯಾಜ್ಯ ತಂದು ಎಸೆಯುವವರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಲು ನಗರಸಭೆ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತಂದು ಎಸೆಯುವವರನ್ನು ಪತ್ತೆ ಮಾಡಿ ಆರಂಭದಲ್ಲಿ ದಂಡ ವಿಧಿಸಲಾಗುವುದು.  ದಂಡ ವಿಧಿಸಿದ ಬಳಿಕವೂ ಮುಂದುವರಿಸಿದರೆ ಕ್ರಿಮಿನಲ್ ಪ್ರಕರಣದ ದಾಖಲಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದು ಸಾರ್ವಜನಿಕರ ನೆಮ್ಮದಿಗೆ ಭಂಗ ತರುವುದು ಹಾಗೂ ಆರೋಗ್ಯಕ್ಕೆ ಹಾನಿಯುಂಟು ಮಾಡುವುದು ಕೂಡ ಅಪರಾಧವೇ ಆಗಿರುವುದರಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ನಗರಸಭಾ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತಂದು ಬೇಕಾಬಿಟ್ಟಿಯಾಗಿ ಎಸೆಯುವವರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಲು ನಗರಸಭೆಯ ಆರೋಗ್ಯ ಇಲಾಖೆಯ ನಿರೀಕ್ಷಕರು ಮತ್ತು ಪರಿಸರ ಅಭಿಯಂತರರ ನೇತೃತ್ವದಲ್ಲಿ ವಿಶೇಷ ಗಸ್ತುಪಡೆ ಕಾರ್ಯಾಚರಿಸುತ್ತಿದೆ. ಈ ತಂಡ ಹಗಲು ಮಾತ್ರವಲ್ಲದೆ ರಾತ್ರಿಯ ವೇಳೆಯೂ ಗಸ್ತು ತಿರುಗುವ ಮೂಲಕ ಪತ್ತೆ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೆ ನಗರದ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ಎಸೆಯುವ ವ್ಯಕ್ತಿಗಳ ಪತ್ತೆ ಹಚ್ಚುವ ಕೆಲಸ ಮಾಡಲೂ ನಗರ ಸಭೆ ಮುಂದಾಗಿದೆ. 

ಕೆಮ್ಮಾಯಿ ಪರಿಸರದಲ್ಲಿ ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುತ್ತಿರುವ ಕುರಿತು ಅಲ್ಲಿನ ಸ್ಥಳೀಯರು ನೀಡಿದ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ನಗರಸಭೆಯ ಅಧಿಕಾರಿಗಳ ತಂಡ ಗ್ರಾಮಾಂತರ ಪ್ರದೇಶದಿಂದ ಬಂದು ತ್ಯಾಜ್ಯ ಚೀಲ ಎಸೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ಹಿಡಿದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಈಗಾಗಲೇ ತ್ಯಾಜ್ಯ ಎಸೆಯುವ ಹಲವು ಮಂದಿಯನ್ನು ಪತ್ತೆ ಮಾಡಿ ಎಚ್ಚರಿಕೆ ನೀಡಿರುವ ಅಧಿಕಾರಿಕಾರಿಗಳು ಮಂದೆ ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಿಗೆ ತ್ಯಾಜ್ಯ ತಂದು ಎಸೆಯುವವರ ವಿರುದ್ದ ಆರಂಭ ಹಂತದಲ್ಲಿ `ಡಂಡ' ಹಾಗೂ ಮುಂದಿನ ಹಂತದಲ್ಲಿ  `ಕ್ರಿಮಿನಲ್ ಮೊಕದ್ದಮೆ'  ನಡೆಸಲು ನಗರಸಭೆ ಮುಂದಾಗಿದೆ.  

ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಪರಿಸರ ಅಭಿಯಂತರ ಗುರುಪ್ರಸಾದ್ ನೇತೃತ್ವದ ತಂಡ ಪತ್ತೆ ಕಾರ್ಯಾಚರಣೆ ನಡೆಸುತ್ತಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News