ಸಮರ್ಪಕ ಕಾಮಗಾರಿ ಮುಗಿಯದೆ ಫ್ಲೈಓವರ್ ಉದ್ಘಾಟನೆ: ಸದಾಶಿವ ಉಳ್ಳಾಲ್ ಆರೋಪ

Update: 2019-06-14 15:14 GMT

ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ತುರಾತುರಿಯಲ್ಲಿ ಉದ್ಘಾಟನೆಗೊಳಿಸಿರುವ ಹಿಂದೆ ಷಡ್ಯಂತ್ರ ಇದೆ. ಸಮರ್ಪಕವಾಗಿ ಕಾಮಗಾರಿ ಮುಗಿಯದೆ ಉದ್ಘಾಟನೆ ನಡೆದ ದಿನದಂದೇ ಮೂರು ಅಪಘಾತಗಳು ನಡೆದು ಓರ್ವ ಗಾಯಾಳು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸದಾಶಿವ ಉಳ್ಳಾಲ್ ಆರೋಪಿಸಿದರು. 

ತೊಕ್ಕೊಟ್ಟುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಆಶ್ರಯದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. 

ಫ್ಲೈಓವರ್ ಜನರಿಗೆ ಸುರಕ್ಷಿತವಾಗಿ ಪ್ರಯಾಣಿಸುವ ಉದ್ದೇಶದಿಂದ ಶಾಸಕರು, ಸಂಸದರು ಸಭೆ ನಡೆಸಿ ಸುರಕ್ಷಿತ ಕ್ರಮಗಳನ್ನು ಕೈಗೊಂಡ ಬಳಿಕ ಉದ್ಘಾಟನೆ ನಡೆಸಬೇಕಿತ್ತು. ಆದರೆ ಉಳ್ಳಾಲದತ್ತ ಹೋಗುವ ಸಮಸ್ಯೆ ಗಂಭೀರವಾಗಿದ್ದರೂ ತುರಾತುರಿಯಲ್ಲಿ ಸಂಸದರು ಉದ್ಘಾಟನೆ ನಡೆಸಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಸಹಕಾರಿಯಾಗುವಂತೆ ಉದ್ಘಾಟಿಸಲಾಯಿತೇ ಅನ್ನುವ ಸಂಶಯವಿದೆ.  ಕೇಂದ್ರ ಸರಕಾರದ ಯೋಜನೆಯಾದರೂ, ರಾಜ್ಯ ಸರಕಾರದ ಪಾಲೂ ಕಾಮಗಾರಿಯಲ್ಲಿದೆ. ಜನರ ತೆರಿಗೆ ಹಣದಿಂದ ಕಾಮಗಾರಿ ನಡೆದಿದೆ. ಭೂಸ್ವಾಧೀನ ಪ್ರಕ್ರಿಯೆ ರಾಜ್ಯ ಸರಕಾರದ ಸಹಕಾರದಿಂದ ಆಗಿದೆ ಅನ್ನುವುದನ್ನು ಸಂಸದರು ಗಮನದಲ್ಲಿರಿಸಬೇಕಿದೆ ಎಂದು ಅವರು ಹೆಳಿದರು.

'ನಿರ್ದೇಶಕರ ವರ್ಗ ತಡೆಯದ ಸಂಸದ': ಕಾಮಗಾರಿ ಇನ್ನೂ ಪೂರ್ಣವಾಗದೇ ಇದ್ದರೂ ನವಯುಗ ಸಂಸ್ಥೆಯ ಇಬ್ಬರು ನಿರ್ದೇಶಕರುಗಳು ಕೋರಿಕೊಂಡು ವರ್ಗಾವಣೆಗೊಂಡಿದ್ದಾರೆ. ತಪ್ಪಿಸಿಕೊಂಡು ವರ್ಗ ಆಗಿರುವುದು ಸ್ಪಷ್ಟ. ಸಂಸದರು ಇದನ್ನು ತಡೆಯಬೇಕಾಗಿತ್ತು. ಪ್ರಾಜೆಕ್ಟ್ ಪೂರ್ಣಗೊಂಡ ಬಳಿಕವಷ್ಟೇ ವರ್ಗಾವಣೆಗೊಳಿಸಬೇಕಿತ್ತು ಎಂದರು. 

ಹೋರಾಟ ಸಮಿತಿ ಅಧ್ಯಕ್ಷ ಈಶ್ವರ್ ಉಳ್ಳಾಲ ಮಾತನಾಡಿ, ಫ್ಲೈಓವರ್ ಉದ್ಘಾಟನೆ ನಡೆಸಿದ ವಿಧಾನವೇ ಸರಿಯಿಲ್ಲ. ಎಲ್ಲರೂ ಜತೆಯಾಗಿ ಚರ್ಚಿಸಿಕೊಂಡು ಲೋಪಗಳಿರುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕ ಉದ್ಘಾಟಿಸಬೇಕಿತ್ತು. ಹಿಂದೆ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದ್ದ ಸಂಸ್ಥೆಯ ವಿರುದ್ಧ ಹೋರಾಡಿ ಜೈಲು ಪಾಲಾಗುವಷ್ಟರಲ್ಲಿ ಶಾಸಕರು ಹೋರಾಟಕ್ಕೆ ಬೆಂಬಲ ನೀಡಿದ ಫಲವಾಗಿ ಯೋಜನೆ ರೂಪುರೇಷೆ ಬದಲಾಗಿತ್ತು. ತುರಾತುರಿ ಉದ್ಘಾಟನೆಯ ಹಿಂದೆ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿದರು. 

ಹೆದ್ದಾರಿ ಬಂದ್ ಎಚ್ಚರಿಕೆ:  ದಿನೇಶ್ ರೈ ಮಾತನಾಡಿ, ಫ್ಲೈಓವರ್ ಉದ್ಘಾಟನೆ ಹೆಸರಿನಲ್ಲಿ ಸಂಸದರ ರಾಜಕೀಯ ಶೋಭೆ ತರುವ ಕೆಲಸವಲ್ಲ, ಒಂದು ತಿಂಗಳ ಗಡುವು ನೀಡುತ್ತೇವೆ. ಸುರಕ್ಷತಾ ಕ್ರಮಗಳನ್ನು ನಡೆಸದೇ ಇದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆಗೆ ಸಿದ್ಧ ಎಂದು ಎಚ್ಚರಿದರು.
ಈ ಸಂದರ್ಭ ಸ್ಥಳೀಯರಾದ ಡೇನಿಸ್ ಡಿಸೋಜ, ಸುರೇಶ್ ಭಟ್ನಗರ, ಬಾಝಿಲ್ ಡಿಸೋಜ, ರಾಜು, ಇಫ್ತಿಕಾರ್ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News