ದಲಿತ ವ್ಯಕ್ತಿಯ ಥಳಿಸಿ ಹತ್ಯೆ: ಇಬ್ಬರ ಬಂಧನ

Update: 2019-06-14 16:18 GMT

ಅಹ್ಮದಾಬಾದ್, ಜೂ.14: ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಮತ್ತು ಅವರ ಚಿಕ್ಕಪ್ಪನಿಗೆ ಗುಂಡು ಹಾರಿಸಿದ ಘಟನೆ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ತಾಂಗದ್‌ನಲ್ಲಿ ಬುಧವಾರ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಕರಣದಲ್ಲಿ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಮೃತರನ್ನು ತಾಂಗದ್‌ನ ಅಂಬೇಡ್ಕರ್‌ನಗರ ನಿವಾಸಿ 32ರ ಹರೆಯದ ಪ್ರಕಾಶ್ ಪರ್ಮರ್ ಎಂದು ಗುರುತಿಸಲಾಗಿದೆ. ಅವರ ಚಿಕ್ಕಪ್ಪ ಸುರೇಶ್ ಪರ್ಮರ್ ಸದ್ಯ ರಾಜ್‌ಕೋಟ್ ನಾಗರಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಾದ ನರೇಶ್ ದಾಂಡಲ್ ಮತ್ತು ದೇವರಾಜ್ ಜಲು ಕೂಡಾ ತಾಂಗದ್ ನಿವಾಸಿಗಳಾಗಿದ್ದು, ಮೇಲ್ವರ್ಗದ ದರ್ಬಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ವರದಿ ತಿಳಿಸಿದೆ.

 ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಂಧಿತ ಆರೋಪಿ ದಾಂಡಲ್ ಮತ್ತೊಂದು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣದಡಿ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ವಿರುದ್ಧ ದೂರು ದಾಖಲಿಸುವಲ್ಲಿ ಪ್ರಕಾಶ್ ಪ್ರಮುಖ ಪಾತ್ರವಹಿಸಿದ್ದ ಎಂದು ಆರೋಪಿ ದಾಂಡಲ್ ಭಾವಿಸಿದ್ದ ಹಾಗಾಗಿ ಆತನನ್ನು ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಹತ್ಯೆಯನ್ನು ವಿರೋಧಿಸಿ ದಲಿತ ಸಮುದಾಯದ ಸದಸ್ಯರು ತಾಂಗದ್‌ನ ಆಝಾದ್ ಮೈದಾನದಲ್ಲಿ ಪ್ರಕಾಶ್ ಪರ್ಮರ್ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು ಮತ್ತು ಕೊಲೆಗಾರರನ್ನು ಜೈಲಿಗೆ ತಳ್ಳುವವರೆಗೆ ಅಂತಿಮ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎಂದು ದೈನಿಕ್ ಜಾಗರಣ್ ಪತ್ರಿಕೆ ವರದಿ ಮಾಡಿದೆ.

 ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಭರವಸೆ ನೀಡಿದ ನಂತರ ಪರ್ಮರ್ ಅಂತ್ಯಸಂಸ್ಕಾರ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News