ದಾಭೋಲ್ಕರ್,ಪನ್ಸಾರೆ ಹತ್ಯೆಗಳಲ್ಲಿ ಸಾಮ್ಯತೆಗಳಿವೆ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಸಿಬಿಐ,ಸಿಐಡಿ

Update: 2019-06-14 16:33 GMT

ಮುಂಬೈ,ಜೂ.14: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಹತ್ಯೆಗಳಲ್ಲಿ ಕೆಲವು ಸಾಮ್ಯತೆಗಳನ್ನು ತಾವು ಗುರುತಿಸಿರುವುದಾಗಿ ಸಿಬಿಐ ಮತ್ತು ಮಹಾರಾಷ್ಟ್ರ ಸಿಐಡಿ ಶುಕ್ರವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿವೆ.

ಈ ಹತ್ಯೆಗಳ ಕುರಿತು ತನಿಖೆಗಳನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಸುವಂತೆ ಕೋರಿ ದಾಭೋಲ್ಕರ್ ಮತ್ತು ಪನ್ಸಾರೆ ಕುಟುಂಬಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ನಡೆಸುತ್ತಿದೆ. ದಾಭೋಲ್ಕರ್ ಅವರನ್ನು 2013,ಆ.20ರಂದು ಪುಣೆಯಲ್ಲಿ ಹತ್ಯೆಗೈಯಲಾಗಿತ್ತು. ಪನ್ಸಾರೆಯವರು 2015,ಫೆ.16ರಂದು ವಾಯುವಿಹಾರಕ್ಕೆ ತೆರಳಿದ್ದಾಗ ಕೊಲ್ಲಾಪುರದ ಅವರ ನಿವಾಸದ ಸಮೀಪದಲ್ಲಿಯೇ ಅವರ ಮೇಲೆ ಗುಂಡುಗಳನ್ನು ಹಾರಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯಸಿರೆಳೆದಿದ್ದರು. ದಾಭೋಲ್ಕರ್ ಪ್ರಕರಣವನ್ನು ಸಿಬಿಐ ಮತ್ತು ಪನ್ಸಾರೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿವೆ.

ದಾಭೋಲ್ಕರ್ ಪ್ರಕರಣದಲ್ಲಿಯ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ,ಆದರೆ ಹತ್ಯೆಗೆ ಬಳಸಿದ್ದ ಪಿಸ್ತೂಲನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ. ಹತ್ಯೆಯ ಬಳಿಕ ನಾಲ್ಕು ನಾಡಪಿಸ್ತೂಲುಗಳನ್ನು ಥಾಣೆ ಬಳಿಯ ಖಾಡಿಯಲ್ಲ್ಲಿ ಎಸೆಯಲಾಗಿದೆ ಎನ್ನಲಾಗಿದ್ದು, ಅವುಗಳ ಶೋಧ ಕಾರ್ಯಾಚರಣೆಗಾಗಿ ಸರಕಾರಿ ಏಜೆನ್ಸಿಗಳಿಂದ ಅಗತ್ಯ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಸಿಬಿಐ ಪರ ವಕೀಲ ಅನಿಲ ಸಿಂಗ್ ತಿಳಿಸಿದಾಗ,ಮಳೆಗಾಲದ ಆರಂಭಕ್ಕೆ ಮುನ್ನವೇ ಈ ಕಾರ್ಯವನ್ನು ಪೂರ್ಣಗೊಳಿಸುವಂತೆ ಪೀಠವು ಸೂಚಿಸಿತು.

ಪನ್ಸಾರೆ ಪ್ರಕರಣದಲ್ಲಿ ಪ್ರಮುಖ ಸಂಚುಕೋರರನ್ನು ಬಂಧಿಸಲಾಗಿದೆ ಮತ್ತು ದಾಳಿ ನಡೆಸಿದ್ದವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಐಡಿ ಪರ ವಕೀಲ ಅಶೋಕ ಮುಂಡರಗಿ ಅವರು ತಿಳಿಸಿದರು.

ಎರಡೂ ಪ್ರಕರಣಗಳ ನಡುವೆ ಏನಾದರೂ ಸಾಮ್ಯತೆಯಿದೆಯೇ ಎಂಬ ಪೀಠದ ಪ್ರಶ್ನೆಗೆ ಮುಂಡರಗಿ ಧನಾತ್ಮಕವಾಗಿ ಉತ್ತರಿಸಿದರು.

ಆದರೆ,ಪನ್ಸಾರೆ ಪ್ರಕರಣದಲ್ಲಿ ಶೂಟರ್‌ಗಳನ್ನು ಈಗಾಗಲೇ ಬಂಧಿಸಬೇಕಿತ್ತು ಎಂದು ಹೇಳಿದ ಪೀಠವು,ಈ ಪ್ರಕರಣದಲ್ಲಿ ಎಲ್ಲೋ ಏನೋ ಪ್ರಮುಖವಾಗಿರುವುದು ತಪ್ಪಿಹೋಗಿರುವಂತೆ ನಮಗೆ ಅನಿಸುತ್ತಿದೆ. ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಯು ಈಗ ಪಣಕ್ಕಿದೆ. ಇದು ದಾಭೋಲ್ಕರ್ ಮತ್ತು ಪನ್ಸಾರೆ ಅವರಂತಹ ಪ್ರತಿಷ್ಠಿತ ವ್ಯಕ್ತಿಗಳ ಕೊಲೆಯಾಗಿರುವ ಪ್ರಕರಣವಾಗಿದೆ ಎಂದು ತಿಳಿಸಿತು.

ಸರಕಾರವು ತನಿಖಾ ಸಂಸ್ಥೆಗಳಿಗೆ ಸಾಧ್ಯವಿರುವ ಎಲ್ಲ ನೆರವುಗಳನ್ನು ಒದಗಿಸಬೇಕು ಎಂದು ನ್ಯಾಯಾಲಯವು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News