ರಕ್ತದಾನದಿಂದ ಜೀವದಾನ: ಡಾ.ಮಧುಸೂದನ್ ನಾಯಕ್

Update: 2019-06-14 16:56 GMT

ಉಡುಪಿ, ಜೂ.14: ಒಬ್ಬ ವ್ಯಕ್ತಿಗೆ ನೀಡಿದ ರಕ್ತದಿಂದ ಕನಿಷ್ಠ ನಾಲ್ಕು ಜೀವವನ್ನು ಉಳಿಸಬಹುದು. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗುವುದಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮಧುಸೂದನ್ ನಾಯಕ್ ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರ ಜ್ಞಾನ ಸಾಧನಾ ಉದ್ಯಾವರ ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯಾವರದ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಜ್ಞಾನ ಸಾಧನಾದಲ್ಲಿ ನಡೆದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಸನ್ಮಾನ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೃತಕವಾಗಿ ರಕ್ತ ತಯಾರಿಸಲು, ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಂದಿಗೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ದಾನಿಗಳು ನೀಡಿದ ರಕ್ತವನ್ನು 35 ದಿನಗಳ ಕಾಲ ಮಾತ್ರ ಸಂಗ್ರಹಿಸಿಡಬಹುದು. ಪ್ಲಾಟಿಲೇಟ್ಸ್ 5 ದಿನಗಳಕಾಲ ಮಾತ್ರ ಇಡಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಾವರ ಜ್ಞಾನ ಸಾಧನ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಜೋನ್ ಎಂ.ಡಿಸೋಜ ಮಾತನಾಡಿ, ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ರಕ್ತದಾನದಿಂದ ಹೆಚ್ಚು ಹೆಚ್ಚು ಜೀವಗಳನ್ನು ಉಳಿಸಬಹುದು. ರಕ್ತದಾನದಿಂದ ಒಂದು ಜೀವ ಉಳಿಸುವುದೇ ನಾವು ಮಾಡುವ ಶ್ರೇಷ್ಠದಾನ.ಆದುದರಿಂದ ಯುವ ಜನತೆ ಹೆಚ್ಚಾಗಿ ರಕ್ತದಾನಿಗಳಾಗಿ ಎಂದು ಸಲಹೆ ನೀಡಿದರು.

ಜಿಲ್ಲೆಯ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್ ಮಾತನಾಡಿ, ಜಿಲ್ಲೆಯಲ್ಲಿ ಗರ್ಭಿಣಿಯರಲ್ಲಿ ಶೇ.50ರಷ್ಟು ರಕ್ತ ಹೀನತೆ ಸಮಸ್ಯೆ ಇಂದಿಗೂ ಕಂಡು ಬರುತ್ತಿದೆ. ಆಹಾರ ಮತ್ತು ಔಷಧಿ ಸೇವಿಸಿ ರಕ್ತಹೀನತೆ ಆಗದಂತೆ ಗಮನ ಹರಿಸಬೇಕು. ಆಕ್ಸಿಡೆಂಟ್ ಆದಂತಹ ಸಂದರ್ಭದಲ್ಲಿಯೇ ಅತೀ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುವುದು ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ. ರಕ್ತದ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಂದು ನಿಮಿಷ ಒಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆ ಇರುತ್ತದೆ. ಜಿಲ್ಲೆಯಲ್ಲಿ 3 ರಕ್ತದ ಅಧಿಕೃತ ನಿಧಿಗಳಿವೆ. ಎಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತದಾನವೂ ಒಂದು ಸಮಾಜ ಸೇವೆ. ಹೀಗಾಗಿ ಯುವಜನತೆ ಹೆಚ್ಚು ಹೆಚ್ಚು ರಕ್ತದಾನ ಮಾಡಬೇಕು ಎಂದರು.

ವಿದ್ಯಾರ್ಥಿಗಳು 4 ತಿಂಗಳಿಗೆ ಒಮ್ಮೆಯಾದರೂ ರಕ್ತದಾನ ಮಾಡಿ ಜೀವ ಉಳಿಸಲು ಸಹಕಾರಿಯಾಗಬೇಕು ಎಂದು ರಕ್ತದಾನಿ ಹೆಬ್ರಿಯ ನರಸಿಂಹ ನಾಯಕ್ ಅಭಿಪ್ರಾಯಪಟ್ಟರು. ರಕ್ತದಾನಿಗಳಿಗೆ ಸನ್ಮಾನದ ಅಗತ್ಯವಿಲ್ಲ, ರಕ್ತದಾನ ದಿಂದ ಒಂದು ಜೀವ ಉಳಿದರೆ ಅದೇ ರಕ್ತದಾನಿಗೆ ಸನ್ಮಾನ. ಯುವ ಜನತೆ ಹೆಚ್ಚು ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಿ ಎಂದು ಕಾರ್ಕಳದ ರಕ್ತದಾನಿ ಶೈಲೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಜಿಲ್ಲೆಯ 6 ಮಂದಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ರಕ್ತದಾನ ಮತ್ತು ಸುರಕ್ಷಿತ ರಕ್ತ ವಿಷಯದ ಕುರಿತು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ವಿಶೇಷ ಉಪನ್ಯಾಸ ನೀಡಿದರು.

ಉದ್ಯಾವರ ಜ್ಞಾನ ಸಾಧನಾ ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರದ ಜೆಟಿಒ ನಾಗೇಂದ್ರ ಕುಮಾರ್ ಸ್ವಾಗತಿಸಿ, ಜಿಲ್ಲಾ ಮೇಲ್ವಿಚಾರಕ ಮಹಾಬಲೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News