ಸುಳ್ಳು ಜಾತಿ ಪ್ರಮಾಣ ಪತ್ರ: ಪ್ರಕರಣ ದಾಖಲು

Update: 2019-06-14 17:09 GMT

ಉಡುಪಿ, ಜೂ.14: ಸುಳ್ಳು ಜಾತಿ ಪ್ರಮಾಣ ಪತ್ರದೊಂದಿಗೆ ಉದ್ಯೋಗ ಪಡೆದು ವಂಚಿಸಿರುವ ಕಟಪಾಡಿ ಸರಕಾರಿ ಗುಡ್ಡೆಯ ನಿವಾಸಿ ಸ್ವಾಮಿನಾಥನ್ ಎಂಬಾತನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡು ರಾಜ್ಯದ ಹಿಂದುಳಿದ ವರ್ಗದ ನಾಯ್ಡು ಜಾತಿಗೆ ಸೇರಿದ ಸ್ವಾಮಿನಾಥನ್, ತಾನು ಪರಿಶಿಷ್ಟ ಜಾತಿಯ ಭೋವಿ ಜಾತಿಯೆಂದು ಉಡುಪಿ ತಹಶೀಲ್ದಾರ್‌ರಿಂದ 1981ರ ಜೂ.15 ಮತ್ತು 2002 ಎ.24ರಂದು ಪ್ರಮಾಣ ಪತ್ರ ಪಡೆದಿದ್ದರು. ಆತ ಅದರ ಆಧಾರದಲ್ಲಿ ಮೀಸಲಾತಿಯಡಿ ಮಂಗಳೂರು ವಿವಿಯಲ್ಲಿ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಯನ್ನು 1982ರಲ್ಲಿ ಪಡೆದು, ನಂತರ ಮೀಸಲಾತಿ ಅಡಿಯಲ್ಲಿ ಮುಂಬಡ್ತಿ ಪಡೆದಿದ್ದರು.

ಉಡುಪಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾ ಧಿಕಾರಿ, ಸ್ವಾಮಿನಾಥನ್ ತಹಶೀಲ್ದಾರ್‌ರಿಂದ ಪರಿಶಿಷ್ಟ ಜಾತಿಯ ಭೋವಿ ಜಾತಿಯವರೆಂದು ಪಡೆದ ಪ್ರಮಾಣ ಪತ್ರವನ್ನು ರದ್ದುಪಡಿಸಿ ಆದೇಶಿಸಿದ್ದರು. ಅದರಂತೆ ತಹಶೀಲ್ದಾರ್ 2019ರ ಜ.10ರಂದು ಎರಡೂ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿದ್ದರು.

ಸ್ವಾಮಿನಾಥನ್ ನಾಯ್ಡು ಜಾತಿಗೆ ಸೇರಿದವರೆಂದು ಗೊತ್ತಿದ್ದರೂ ಕೂಡ ಭೋವಿ ಜಾತಿಯ ಸುಳ್ಳು ಪ್ರಮಾಣ ಪತ್ರ ಪಡೆದಿದ್ದು, ಅದರ ಆಧಾರದಲ್ಲಿ ಉದ್ಯೋಗ ಹಾಗೂ ಮುಂಬಡ್ತಿ ಪಡೆದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಾಗೂ ಸರಕಾರಕ್ಕೆ ವಂಚಿಸಿರುವುದಾಗಿ ಮಂಗಳೂರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಹಿಳಾ ಮುಖ್ಯ ಆರಕ್ಷಕಿ ಬೀನಾ ಕುಮಾರಿ ಆರ್.ಎಸ್. ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News