×
Ad

ವರದಕ್ಷಿಣೆ ಹಣಕ್ಕಾಗಿ ಕೊಪ್ಪಳ ಮೂಲದ ಮಹಿಳೆಯ ಕೊಲೆ

Update: 2019-06-14 22:57 IST

ಮಲ್ಪೆ, ಜೂ.14: ಹೆಚ್ಚುವರಿ ವರದಕ್ಷಿಣೆ ಹಣ ತರುವಂತೆ ಪತಿ ಹಾಗೂ ಪತಿಯ ಮನೆಯವರು ಕೊಪ್ಪಳ ಮೂಲದ ಮಹಿಳೆಯ ತಲೆಗೆ ಹೊಡೆದು ಕೊಲೆ ಮಾಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಕೊಪ್ಪಳ ಜಿಲ್ಲೆಯ ಕನಕಗಿರಿಯ ವಿರುಪಣ್ಣ ಆಲೂರು ಎಂಬವರ ಮಗಳು ಹುಲಿಗೇಮ್ಮ(22) ಎಂದು ಗುರುತಿಸಲಾಗಿದೆ. ಇವರು 2 ವರ್ಷಗಳ ಹಿಂದೆ ಲಾಯದೂಣಿಸಿ ಗ್ರಾಮದ ಸೋಮಪ್ಪ(25) ಎಂಬಾತನನ್ನು ಮದುವೆಯಾಗಿದ್ದು, ಸೋಮಪ್ಪ ತನ್ನ ಹೆಂಡತಿಯನ್ನು ಒಂದು ತಿಂಗಳ ಹಿಂದೆ ಮಲ್ಪೆಗೆ ದುಡಿಯಲು ಕರೆದುಕೊಂಡು ಬಂದಿದ್ದನು.

2019ರ ಮೇ17ರಂದು ಹುಲಿಗೇಮ್ಮಳನ್ನು ಊರಿಗೆ ಕಳುಹಿಸಿಕೊಟ್ಟಿದ್ದು ತನ್ನ ಗಂಡನ ಮನೆಯಾದ ಲಾಯದೂಣಿಸಿ ಗ್ರಾಮಕ್ಕೆ ಬಂದಿದ್ದ ಹುಲಿಗೇಮ್ಮಳಿಗೆ ಹುಷಾರಿಲ್ಲ ಎಂದು ಹೇಳಿ ಆಕೆಯ ಅತ್ತೆ ಆಕೆಯನ್ನು ತವರು ಮನೆಗೆ ಕಳುಹಿಸಿದ್ದರು. ಮೇ 23ರಂದು ಆಕೆಯನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಹುಲಿಗೇಮ್ಮರ ತಲೆಗೆ ಒಳಪೆಟ್ಟಾಗಿರುವುದಾಗಿ ತಿಳಿಸಿದ್ದರು.

ಅಲ್ಲಿಂದ ಮೇ 24ರಂದು ಆಕೆಯನ್ನು ಕೊಪ್ಪಳ ಜಿಲ್ಲಾಸ್ಪತ್ರಗೆ ಕರೆದುಕೊಂಡು ಹೋಗುವಾಗ ‘ಗಂಡ ಹೆಚ್ಚುವರಿ ವರದಕ್ಷಣೆ ಹಣಕ್ಕಾಗಿ ಕಿರುಕಳ ನೀಡುತ್ತಿದ್ದು ಇದೇ ವಿಚಾರದಲ್ಲಿ ಗಂಡ ನನ್ನ ತಲೆಯ ಹಿಂಭಾಗಕ್ಕೆ ಗುಣಕದಿಂದ ಹೊಡೆದಿದ್ದಾನೆ. ಅಂದಿನಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಆಕೆ ಮನೆಯವರಲ್ಲಿ ತಿಳಿಸಿದ್ದಳೆನ್ನಲಾಗಿದೆ. ಅದೇ ದಿನ ಆಕೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಹುಲಿಗೇಮ್ಮಳ ಸಾವಿಗೆ ಕಾರಣರಾದ ಸೋಮಪ್ಪ, ಮಾವ ಬಸಪ್ಪ ಆದಪೂರ, ಮೈದುನ ಹುಲಗೇಶ, ಅತ್ತೆ ದುರುಗಮ್ಮ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ಮೃತರ ಸಹೋದರ ಚಿದಾನಂದ ನೀಡಿದ ದೂರಿನಂತೆ ಮಲ್ಪೆಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News