ರಕ್ತದಾನದಲ್ಲಿ ಎಲ್ಲರೂ ತೊಡಗಿಸಿಕೊಳ್ಳುವುದು ಅಗತ್ಯ: ಎಸಿಪಿ ರಾಮರಾವ್

Update: 2019-06-14 17:32 GMT

ಉಳ್ಳಾಲ: ರಕ್ತದಾನ ಮಹಾದಾನವಾಗಿದ್ದು ರಕ್ತದ ಆವಶ್ಯಕತೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯ ಪ್ರಸ್ತುತ ಕಾಲದಲ್ಲಿ ಅಗತ್ಯ ಎಂದು ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನೆ, ಪೊಲೀಸ್ ಇಲಾಖೆಯ  ದಕ್ಷಿಣ ಉಪ ವಿಭಾಗ ಹಾಗೂ ಬ್ಲಡ್ ಬ್ಯಾಂಕ್ ಆಶ್ರಯದಲ್ಲಿ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಶುಕ್ರವಾರ ಜರಗಿದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇಮ ಡೀನ್ ಡಾ. ಪ್ರಕಾಶ್ ಮಾತನಾಡಿ, ರಕ್ತ ಮಾರುಕಟ್ಟೆಯಲ್ಲಿ ದೊರೆಯುವಂತದ್ದಲ್ಲ, ದಾನದಿಂದಲೇ ನೀಡಬೇಕಾಗಿದೆ. ಜೀವನ ಉಳಿಸಲು ನೀಡುವ ಉಡುಗೊರೆಯಾಗಿರುತ್ತದೆ. ಹಿಂದೆ ವೈದ್ಯರು, ಸಿಬ್ಬಂದಿ ರಕ್ತ ಒದಗಿಸುವಂತಹ ವಾತಾವರಣವಿತ್ತು. ಈಗ ಕಾಲ ಬದಲಾವಣೆಯಾಗಿದೆ. ರಕ್ತದ ಬಣ್ಣ ಒಂದೇ, ಬೇಧವಿಲ್ಲದೆ ಎಲ್ಲರೂ ಮಾಡಬೇಕಾದ ಮಹತ್ಕಾರ್ಯ ಎಂದರು. 

ಈ ವೇಳೆ 24 ವರ್ಷಗಳಿಂದ ರಕ್ತದಾನ ಶಿಬಿರ, ಆರೋಗ್ಯ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವ, ರಾಜ್ಯ ಪ್ರಶಸ್ತಿ ಪುರಸ್ಕೃತ ಫರಂಗಿಪೇಟೆ ಸೇವಾಂಜಲಿ ಪ್ರತಷ್ಠಾನದ ಟ್ರಸ್ಟೀ ಕೃಷ್ಣ ಕುಮಾರ್  ಪೂಂಜ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಕಾರ್ಯಕರ್ತರೆಲ್ಲರ ಸೇವಾ ಮನೋಭಾವದಿಂದ ಕೂಡಿರುವುದರಿಂದ 24 ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಾಧ್ಯವಾಗಿದೆ. ದ.ಕ ಜಿಲ್ಲೆಯಲ್ಲಿ ರಕ್ತದ ಕೊರತೆ ನಿರ್ಮಾಣವಾಗಿದೆ. ಎನ್‍ಎಸ್ ಎಸ್ ಕಾರ್ಯಕರ್ತರು ಇತರರಿಗೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ದೂರದಿಂದ ಬರುವ ಮಂದಿಗೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳು ರಕ್ತ ಒದಗಿಸುವಂತಹ ಕಾರ್ಯ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ನಿಟ್ಟೆ ವಿ.ವಿ ಜೊತೆಗೆ ಪೊಲೀಸ್ ಇಲಾಖೆ ಸೇರಿಕೊಂಡು ನಡೆಸಿದ ರಕ್ತದಾನ ಕಾರ್ಯ ಶ್ಲಾಘನೀಯ ಎಂದರು. 

ಕೊಣಾಜೆ ಠಾಣಾಧಿಕಾರಿ ರವೀಶ್ ನಾಯ್ಕ್, ಕ್ಷೇಮ ಸಹ ಡೀನ್ ಡಾ.ಜೆ.ಪಿ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. 
ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಹಿರೇಮಠ್ ಸ್ವಾಗತಿಸಿದರು. ಡಾ.ಸುಮಲತಾ ಸನ್ಮಾನಿತರ ವಿವರ ಓದಿದರು. ಯಶೋದಾ ಕಾರ್ಯಕ್ರಮ ನಿರೂಪಿಸಿದರು. ಶಶಿ ಕುಮಾರ್ ಶೆಟ್ಟಿ ವಂದಿಸಿದರು.

ಪೊಲೀಸ್ ಇಲಾಖೆಯ ದಕ್ಷಿಣ ಉಪವಿಭಾಗದ ಸುಮಾರು 21 ಕ್ಕೂ ಅಧಿಕ ಪೊಲೀಸರು  ಹಾಗೂ ನಿಟ್ಟೆ ವಿ.ವಿ ಯ ಎನ್ ಎಸ್ ಎಸ್ ವಿದ್ಯಾರ್ಥಿಗಳು ರಕ್ತದಾನ  ನಡೆಸುವ ಮೂಲಕ ಮಾದರಿಯಾದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News