ಮುಡಾ ಅಧ್ಯಕ್ಷರಿಗೆ, ಪುರಸಭಾ ಚುನಾಯಿತ ಸದಸ್ಯರಿಗೆ 'ಅಭಿನಂದನಾ ಸಮಾರಂಭ'

Update: 2019-06-14 18:09 GMT

ಮೂಡುಬಿದಿರೆ: ದೇಶದ ಅಭಿವೃದ್ಧಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಈ ಬಾರಿಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ನಮಗೆ ಒದಗಿಸಲಾಗಿರುವ ಇವಿಎಂ ಮೆಷಿನ್‍ಗಳ ಬಗ್ಗೆ ವಿರೋಧವಿದೆ. ಒಮ್ಮೆ ಬಳಕೆಯಾದ ಮೆಷಿನ್‍ಗಳು ಮತ್ತೆ ಆರು ತಿಂಗಳ ನಂತರದ ಚುನಾವಣೆಗೆ ಬಳಕೆಯಾಗಬೇಕು ಆದರೆ ಇಲ್ಲಿ 3 ತಿಂಗಳ ಮೊದಲೇ ಬಳಕೆಯಾಗಿದ್ದು ಮತ ಹಾಕುವಾಗ ಹೆಚ್ಚಿನ ಮತಗಳೆಲ್ಲವೂ ಬಿಜೆಪಿ ಬಿದ್ದಿರುವುದರಿಂದ ಮೆಷಿನ್ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಮಾಜಿ ಸಂಸದ ವಿನಯಕುಮಾರ್ ಆರೋಪಿಸಿದರು.  

ಅವರು ಪುರಸಭೆಯ ಚುನಾವಣೆಯಲ್ಲಿ ವಿಜೇತರಾಗಿರುವ ನೂತನ ಸದಸ್ಯರಿಗೆ ಮತ್ತು ಮುಡಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರತ್ನಾಕರ ಸಿ.ಮೊಯ್ಲಿ ಅವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಸಮಾಜಮಂದಿರದಲ್ಲಿ ಆಯೋಗಿಸಲಾಗಿರುವ "ಅಭಿನಂದನಾ ಸಮಾರಂಭ" ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚುನಾಯಿತ 11 ಸದಸ್ಯರಿಗೆ ಗಿಡಗಳನ್ನು ನೀಡಿ ಅಭಿನಂದಿಸಿ ಮಾತನಾಡಿದರು. ಸೋಲಿನ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಆತಂಕಬೇಡ. ಬಿಜೆಪಿಯಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಲು ಕಾರ್ಯಕರ್ತರನ್ನು ನಿರ್ಮಾಣ ಮಾಡಿದಂತೆ ನಾವು ಕೂಡಾ ಮಾಡುವ ಮೂಲಕ ಪಕ್ಷ ಬಲವರ್ಧನೆ ಪ್ರಯತ್ನಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ ಕಾಂಗ್ರೆಸ್ ಪಕ್ಷ ಬೆಳೆದಿರುವ ಪಕ್ಷ. ಸೋಲಿನ ಚಿಂತೆಯನ್ನು ಬಿಡಿ. ಕತ್ತಲೆಯಾದರೆ ಮತ್ತೆ ಬೆಳಕಾಗಲೇ ಬೇಕು. ಚಿಂತನೆ ಮಾಡಿ ಪಕ್ಷಕ್ಕಾಗಿ ದುಡಿದರೆ ಮತ್ತೆ ಪಕ್ಷವು ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಭರವಸೆಯಿದೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಅವರು ಕಾರ್ಯಕರ್ತರು ಸೋಲಿನಿಂದ ನಿರಾಶರಾಗಬೇಡಿ ಆಶಾವಾದಿಗಳಾಗಿರಿ. ಪಕ್ಷ ಸಂಘಟನೆಗಾಗಿ ಎಲ್ಲಾ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ಅಭಿವೃದ್ಧಿಯಲ್ಲಿ ನಾವು ರಾಜಕೀಯ ಮಾಡುವುದು ಬೇಡ. ವಿರೋಧ ಪಕ್ಷ ಇರುವುದು ಕೇವಲ ವಿರೋಧಿಸುವುದಕ್ಕಾಗಿ ಅಲ್ಲ. ಮೂಡುಬಿದಿರೆಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳಿಗೆ ನಾವು ಈಗಿನ ಶಾಸಕರಿಗೆ ಸಹಕಾರ ನೀಡೋಣ. ಚುನಾಯಿತರಾಗಿರುವ ಸದಸ್ಯರು ಉತ್ತಮ ಕೆಲಸಗಳಿಗೆ ಸ್ಪಂದಿಸಿ ಎಂದು ಹೇಳಿದರು. 

ಎಪಿಎಂಸಿ ಅಧ್ಯಕ್ಷ ಪ್ರವೀಣ್ ಕುಮಾರ್, ಪಕ್ಷದ ಮುಖಂಡರುಗಳಾದ ಧನಂಜಯ ಮಟ್ಟು, ವಸಂತ ಬೆರ್ನಾಲ್, ರಾಗು ಪೂಜಾರಿ, ಚಂದ್ರಹಾಸ ಸನಿಲ್, ಸುಪ್ರಿಯಾ ಡಿ.ಶೆಟ್ಟಿ, ರೀಟಾ ಕುಟಿನ್ಹಾ, ಅಬೂಬಕ್ಕರ್, ಜೆ.ಬಿ ಹಾಜರ್, ಡಿ.ಎ.ಉಸ್ಮಾನ್ ಮತ್ತು ಪುರಸಭಾ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಡಾ ಅಧ್ಯಕ್ಷ ಚುನಾಯಿತ ಸದಸ್ಯರ ಪಟ್ಟಿ ನೀಡಿದರು. ಶಿವಾನಂದ ಪಾಂಡ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News