ರೋಟರಿ ಸಂಸ್ಥೆಯಿಂದ ಮಹತ್ವದ ಯೋಜನೆಯಾದ ಡಯಾಲಿಸಿಸ್ ಘಟಕ ಆರಂಭಿಸುವ ಗುರಿ: ವಾಮನ ಪೈ

Update: 2019-06-14 18:11 GMT

ಪುತ್ತೂರು: ರೋಟರಿ ಕ್ಲಬ್‍ನ ಅಂದಿನ ಶ್ರಮದಿಂದಾಗಿ ಪ್ರಸ್ತುತ ರೋಟರಿ ಕ್ಯಾಂಪ್ಕೊ  ಬ್ಲಡ್ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದ್ದು, ಜನತೆಗೆ ಪಾಲಿಗೆ ಬಹಳಷ್ಟು ಅನುಕೂಲಕಾರಿ ವ್ಯವಸ್ಥೆಯಾಗಿ ರೂಪುಗೊಂಡಿದೆ. ಮುಂದೆ ರೋಟರಿ ಸಂಸ್ಥೆಯಿಂದ ಮಹತ್ವದ ಯೋಜನೆಯಾದ ಡಯಾಲಿಸಿಸ್ ಘಟಕ ಆರಂಭಿಸುವ ಗುರಿಯಿದ್ದು ಸುಮಾರು ರೂ. 40 ಲಕ್ಷ ವೆಚ್ಚದ ಡಯಾಲಿಸಿಸ್ ಘಟಕ 6 ತಿಂಗಳೊಳಗೆ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ ಎಂದು ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ಚಯರ್‍ಮೆನ್ ಆಗಿರುವ ವಾಮನ ಪೈ ಹೇಳಿದರು. 

ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ರೆಡ್‍ಕ್ರಾಸ್ ಸಂಸ್ಥೆ ಮತ್ತು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್  ಸಹಯೋಗದಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಇಲ್ಲಿನ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ನಲ್ಲಿ ನಡೆದ  ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಸಮಾಜದಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ಬೇರೆ ಬೇರೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿವೆ. ಆದರೆ ರಕ್ತದಾನ ಮತ್ತು ಪರಿಸರ ರಕ್ಷಣೆ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಈ ಕಾರ್ಯಕ್ರಮದ ಸಂಘಟಕರ ಕಾರ್ಯ ಶ್ಲಾಘನೀಯ ವಿಚಾರವಾಗಿದೆ ಎಂದರು. 

ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಅವರು ರಕ್ತದಾನದ ಅಗತ್ಯೆ ಮತ್ತು ಪ್ರಾಮುಖ್ಯತೆಯ ಕುರಿತು ಮಾಹಿತಿ ನೀಡಿದರು. 

ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ ಅವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ರೆಡ್‍ಕ್ರಾಸ್ ಸೊಸೈಟಿಯ ಪುತ್ತೂರು ಘಟಕದ ಕಾರ್ಯಾಧ್ಯಕ್ಷ ಆಸ್ಕರ್ ಆನಂದ್ ಮಾತನಾಡಿದರು.

ಈ ಸಂದರ್ಭದಲ್ಲಿ 69 ಬಾರಿ ರಕ್ತದಾನ ಮಾಡಿದ ರೋಟರಿ ಕ್ಲಬ್‍ನ  ವಸಂತ ಜಾಲಾಡಿ ಅವರನ್ನು ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಉದ್ಯಮಿ ಪ್ರೇಮಾನಂದ ಡಿ ಉಪಸ್ಥಿತರಿದ್ದರು. ಕುಲಾಲ ಸಮಾಜ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ದಿನಕರ್ ಪಡೀಲ್ ಪ್ರಾರ್ಥಿಸಿದರು. ಕುಲಾಲ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಹೇಶ್ ಕುಲಾಲ್ ಸ್ವಾಗತಿಸಿದರು. ಸಂಘದ ನಿಕಟಪೂರ್ವ ಉಪಾಧ್ಯಕ್ಷ ಸಚ್ಚಿದಾನಂದ ಕೆ ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News