ಮಂಗಳೂರು ವಿವಿಯಲ್ಲಿ ಓಪನ್ ಹೌಸ್ ಕಾರ್ಯಕ್ರಮ ಉದ್ಘಾಟನೆ

Update: 2019-06-14 18:15 GMT

ಕೊಣಾಜೆ: ಇಂದು ಶಿಕ್ಷಣ  ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯೂ ಕೂಡಾ ಕಾಲಕ್ಕೆ ಅನುಗುಣವಾಗಿ ಬದಲಾವಣೆಯನ್ನು ಕಂಡುಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಜೀವನದಲ್ಲಿ ನಾವಿಡುವ ಹೆಜ್ಜೆ ಮತ್ತು ಆಯ್ಕೆಗಳ ಬಗ್ಗೆ ಹೆಚ್ಚಿನ ಗಮನ ನೀಡಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು  ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಲೆಕ್ಚರ್ ಹಾಲ್‍ನಲ್ಲಿ ಶುಕ್ರವಾರ ಓಪನ್ ಹೌಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿದ್ದು ಇದರ ಸದುಪಯೋಗದೊಂದಿಗೆ ಮುನ್ನಡೆಯಬೇಕಿದೆ. ಮಂಗಳೂರು ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು ಓಪನ್ ಹೌಸ್ ನಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅವಕಾಶ ಮತ್ತು ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿಕೊಡುವಲ್ಲಿ ಸಹಕಾರಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಹಿಂದಿನ ಕಾಲದಲ್ಲಿ ಶೈಕ್ಷಣಿಕ ವಿಷಯಗಳ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲದೆ ಗೊಂದಲಗಳಿದ್ದುವು. ಆದರೆ ಇಂದು ಕಾಲ ಬದಲಾಗಿದ್ದು ವಿದ್ಯಾರ್ಥಿಗಳಿಗೆ ಅವಕಾಶಗಳು ಮತ್ತು ಶೈಕ್ಷಣಿಕ ಆಯ್ಕೆಗಳ ಬಗ್ಗೆ ಉಪಯುಕ್ತ ಮಾಹಿತಿ ಸಿಗುತ್ತಿವೆ. ಆದರೆ ನಾವು ಯಾವುದೇ ವಿಷಯವನ್ನು ಆಯ್ಕೆ ಮಾಡಿದ ನಂತಹ ಕಠಿಣ ಪರಿಶ್ರಮ ಮತ್ತು ಆ ವಿಷಯವನ್ನು ಪ್ರೀತಿಸುವುದನ್ನು ಕಲಿಯಬೇಕು. ಆಗ ನಾವು ಸಾಗುವ ದಾರಿಯಲ್ಲಿ ಯಾವುದೇ ಅಡೆತಡೆಗಳಿದ್ದರೂ ಯಶಸ್ವಿಯತ್ತ ಸಾಗುತ್ತೇವೆ ಎಂದರು.

ವಿದ್ಯಾರ್ಜನೆಯೊಂದಿಗೆ ಶಾರೀರಿಕ, ಮಾನಸಿಕ ಬೆಳವಣಿಗೆಯೊಂದಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ  ಗಮನ ಹರಿಸುವ ಶೈಕ್ಷಣಿಕ ವಾತಾವರಣವು ಇರಬೇಕು. ಮಂಗಳೂರು  ವಿಶ್ವವಿದ್ಯಾಲಯವು ಈ ನಿಟ್ಟಿನಲ್ಲಿ ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಪ್ರಮುಖವಾಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಆಶಯವನ್ನು ಈಡೇರಿಸಲು ಪ್ರಥಮ ಆಧ್ಯತೆಯನ್ನು ನೀಡಲಾಗುವುದು. ಮುಂದಿನ ವರ್ಷಗಳಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಇನ್ನೂ ವಿಭಿನ್ನವಾಗಿ ರೂಪಿಸಲಾಗುವುದು ಎಂದು ಹೇಳಿದರು.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರಾಚಾರಿ ಉಪಸ್ಥಿತರಿದ್ದರು. 

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಎ.ಎಂ.ಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಧರ್ಮ ಅವರು ವಂದಿಸಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News