ಎನ್‌ಡಿಟಿವಿಯಲ್ಲಿ ನಿರ್ದೇಶಕ ಹುದ್ದೆ ಹೊಂದುವುದರಿಂದ ಪ್ರಣಯ್ ರಾಯ್ ದಂಪತಿಗೆ 2 ವರ್ಷ ನಿರ್ಬಂಧ

Update: 2019-06-15 07:03 GMT

ಹೊಸದಿಲ್ಲಿ, ಜೂ.15: ಎನ್‌ಡಿಟಿವಿ ಪ್ರವರ್ತಕರಾಗಿರುವ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ಅವರಿಗೆ ತಮ್ಮ ಸಂಸ್ಥೆಯಲ್ಲಿ ಯಾವುದೇ ನಿರ್ದೇಶಕ ಹುದ್ದೆಯನ್ನು ಎರಡು ವರ್ಷಗಳ ಕಾಲ ಹೊಂದುವುದರಿಂದ The Securities and Exchange Board of India (SEBI) ಸೆಬಿ ನಿರ್ಬಂಧ ಹೇರಿದೆ.

2008-2010 ಅವಧಿಯಲ್ಲಿ ಸಾಲ ಒಪ್ಪಂದಕ್ಕೆ ಬರುವ ವೇಳೆ ಮಹತ್ವದ ಮಾಹಿತಿಯನ್ನು ಸಂಸ್ಥೆಯ ಶೇರುದಾರರಿಂದ ಮರೆಮಾಚಿದ ಆರೋಪದ ಮೇಲೆ ರಾಯ್ ದಂಪತಿ ಹಾಗೂ ಅವರ ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್ ಸಂಸ್ಥೆಗೆ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲೂ ನಿರ್ಬಂಧ ಹೇರಲಾಗಿದೆ. ಯಾವುದೇ ಲಿಸ್ಟೆಡ್ ಸಂಸ್ಥೆಯಲ್ಲಿ ಮುಂದಿನ ಒಂದು ವರ್ಷದ ತನಕ ನಿರ್ದೇಶಕರಾಗುವುದಕ್ಕೂ ಪ್ರೊಣಯ್ ರಾಯ್ ಮತ್ತವರ ಪತ್ನಿಗೆ ನಿರ್ಬಂಧ ವಿಧಿಸಲಾಗಿದೆ.

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ಲಭ್ಯ ಮಾಹಿತಿಯಂತೆ ಪ್ರಣಯ್ ರಾಯ್ ಸದ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ-ಅಧ್ಯಕ್ಷರಾಗಿದ್ದರೆ ರಾಧಿಕಾ ರಾಯ್ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ.

ಸಂಸ್ಥೆಯ ಪ್ರವರ್ತಕರು ಮೂರು ಸಾಲ ಒಪ್ಪಂದ ಮೊತ್ತದ ಕುರಿತಾದ ಮಾಹಿತಿಯನ್ನು ಮರೆಮಾಚಿದ್ದೇ ಅಲ್ಲದೆ ಸ್ಟಾಕ್ ಎಕ್ಸ್‌ಚೇಂಜ್ ಗಳಿಗೆ ಅಗತ್ಯ ಮಾಹಿತಿ ನೀಡದೇ ಇರುವ ಜತೆಗೆ ಅಲ್ಪಸಂಖ್ಯಾತ ಶೇರುದಾರರ, ಅಂದರೆ ಕಡಿಮೆ ಮೊತ್ತ ಹೂಡಿಕೆ ಮಾಡಿರುವ ಶೇರುದಾರರಿಂದ ಮಾಹಿತಿ ಗೌಪ್ಯವಾಗಿರಿಸಿದ್ದರು ಎಂದು ಸೆಬಿ ತನ್ನ 51 ಪುಟಗಳ ಆದೇಶದಲ್ಲಿ ಉಲ್ಲೇಖಿಸಿದೆ.

ಅತಿರೇಕದ ಕ್ರಮ: ಎನ್‌ಡಿಟಿವಿಯ ನಿರ್ದೇಶಕ ಹುದ್ದೆಯಿಂದ ಕೆಳಗಿಳಿಯುವಂತೆ ಹಾಗೂ ಯಾವುದೇ ಪ್ರಮುಖ ಹುದ್ದೆಯನ್ನು ಎರಡು ವರ್ಷಗಳ ಕಾಲ ಹೊಂದದಂತೆ ತಮಗೆ ಸೆಬಿ ನೀಡಿರುವ ಆದೇಶವನ್ನು ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ಅತಿರೇಕದ ಕ್ರಮವೆಂದು ಬಣ್ಣಿಸಿದ್ದಾರೆ. ಇದು ಎಲ್ಲ ನಿಯಮಾವಳಿಯ ವಿರುದ್ಧವಾಗಿದೆ ಎಂದೂ ಹೇಳಿಕೊಂಡಿದ್ದಾರೆ. ಶೋಕಾಸ್ ನೋಟಿಸ್ ನಲ್ಲಿ ಉಲ್ಲೇಖವಾಗದ ವಿಚಾರಗಳ ಕುರಿತಾಗಿಯೂ ಸುಳ್ಳು ನಿರ್ಧಾರಗಳಿವೆ ಎಂದು ಹೇಳಿರುವ ಅವರು, ಮುಂದಿನ ಕೆಲ ದಿನಗಳಲ್ಲಿ ತಾವು ಸೆಬಿ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News