ವಿಮಾನ ಅಪಘಾತದ ಮೃತದೇಹಗಳನ್ನು ತೆಗೆಯಲು ಪ್ರತಿಕೂಲ ಹವಾಮಾನ ಅಡ್ಡಿ: ವಾಯುಪಡೆ

Update: 2019-06-15 18:00 GMT

ಹೊಸದಿಲ್ಲಿ,ಜೂ.15: ಕಳೆದ ವಾರ ಎಎನ್-32 ವಿಮಾನವು ಪತನಗೊಂಡು ಸಾವನ್ನಪ್ಪಿರುವ 13 ಸಿಬ್ಬಂದಿಗಳ ಶವಗಳನ್ನು ಹೊರಗೆ ತೆಗೆಯುವ ಕಾರ್ಯವು ಪ್ರತಿಕೂಲ ಹವಾಮಾನದಿಂದಾಗಿ ವಿಳಂಬಗೊಂಡಿದೆ ಎಂದು ಭಾರತೀಯ ವಾಯುಪಡೆಯು ಶನಿವಾರ ತಿಳಿಸಿದೆ. ನತದೃಷ್ಟ ವಿಮಾನದ ಕಾಕ್‌ಪಿಟ್ ಧ್ವನಿಮುದ್ರಕ ಮತ್ತು ಫ್ಲೈಟ್ ಡಾಟಾ ರೆಕಾರ್ಡರ್ ಶುಕ್ರವಾರ ಪತ್ತೆಯಾಗಿದ್ದವು.

ಜೂನ್ 7ರಂದು 13 ಜನರಿದ್ದ ಭಾರತೀಯ ವಾಯುಪಡೆಯ ವಿಮಾನ ಅಸ್ಸಾಮಿನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾಕ್ಕೆ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿತ್ತು. ಜೂ.11ರಂದು ಅರುಣಾಚಲ ಪ್ರದೇಶದ ದುರ್ಗಮ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು.

ಚೀತಾ ಮತ್ತು ಎಎಲ್‌ಎಚ್ ಹೆಲಿಕಾಪ್ಟರ್‌ಗಳನ್ನು ಸನ್ನದ್ಧವಾಗಿರಿಸಲಾಗಿದ್ದು,ಹವಾಮಾನದಲ್ಲಿ ಸುಧಾರಣೆಯಾದ ಕೂಡಲೇ ಕಾರ್ಯಾಚರಣೆಯನ್ನು ಆರಂಭಿಸಲಿವೆ. ವಾಯುಯೋಧರ ಶವಗಳನ್ನು ಹೊರಕ್ಕೆ ತೆಗೆಯಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ವಾಯುಪಡೆಯು ಟ್ವೀಟಿಸಿದೆ.

ತನ್ನ ಸಿಬ್ಬಂದಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು,ರಕ್ಷಣಾ ಕಾರ್ಯಾಚರಣೆಯ ಕುರಿತು ಮಾಹಿತಿಗಳನ್ನು ಆಗಿಂದಾಗ್ಗೆ ಅವರಿಗೆ ಒದಗಿಸಲಾಗುತ್ತಿದೆ ಎಂದೂ ಅದು ತಿಳಿಸಿದೆ.

ಸಿಬ್ಬಂದಿಗಳ ಶವಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಮೇಲಕ್ಕೆತ್ತಬೇಕಿದೆ ಮತ್ತು ಅವುಗಳನ್ನು ಹಂತಹಂತವಾಗಿ ಜೋರ್ಹಾಟ್‌ಗೆ ತರಲಾಗುವುದು. ಪ್ರತಿಕೂಲ ಹವಾಮಾನವು ಮುಂದುವರಿದಿದ್ದು,ಕಾರ್ಯಾಚರಣೆಯನ್ನು ನಿಧಾನಗೊಳಿಸುವ ಸಾಧ್ಯತೆಯಿದೆ ಎಂದು ವಾಯುಪಡೆಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿತ್ತು.

ಮತ್ತೆ ಇಂತಹ ಅಪಘಾತವಾಗದಂತೆ ನೋಡಿಕೊಳ್ಳಲಾಗುವುದು:ಧನೋವಾ

ಎಎನ್-32 ವಿಮಾನ ಪತನಕ್ಕೆ ಕಾರಣವನ್ನು ಕಂಡುಕೊಳ್ಳಲಾಗುವುದು ಮತ್ತು ಇಂತಹ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅವರು ಹೇಳಿದ್ದಾರೆ. ಶನಿವಾರ ಹೈದರಾಬಾದ ಸಮೀಪದ ದುಂಡಿಗಲ್‌ನ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಕಂಬೈನ್ಡ್ ಗ್ರಾಜ್ಯುಯೇಶನ್ ಪರೇಡ್‌ನ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿಮಾನ ಪತನಕ್ಕೆ ಕಾರಣಗಳನ್ನು ತಿಳಿಯಲು ಎಲ್ಲ ವಿವರಗಳನ್ನು ಪರಿಶೀಲಿಸಲಾಗುವುದು. ಅರುಣಾಚಲ ಪ್ರದೇಶವು ದುರ್ಗಮ ಸ್ಥಳಗಳನ್ನು ಒಳಗೊಂಡಿದ್ದು,ಹೆಚ್ಚಿನ ಸಮಯ ಈ ಸ್ಥಳಗಳು ಮೋಡಗಳಿಂದ ಕೂಡಿರುತ್ತವೆ. ಇಂತಹ ವಾತಾವರಣದಲ್ಲಿ ನಿಯಂತ್ರಿತ ಹಾರಾಟ ನಡೆಸುವಾಗ ವಾಯುಪಡೆಯ ವಿಮಾನಗಳು ಮಾತ್ರವಲ್ಲ,ಪವನಹಂಸ್ ಹೆಲಿಕಾಪ್ಟರ್ ಇತ್ಯಾದಿಗಳೂ ಪತನಗೊಂಡಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News