ಬೃಹತ್ ಪ್ರತಿಭಟನೆಗಳಿಗೆ ಮಣಿದ ಹಾಂಕಾಂಗ್ ಆಡಳಿತ: ಗಡಿಪಾರು ಮಸೂದೆ ಅಮಾನತು

Update: 2019-06-15 18:12 GMT

ಹಾಂಕಾಂಗ್, ಜೂ. 15: ಅಭೂತಪೂರ್ವ ಪ್ರತಿಭಟನೆಗೆ ಮಣಿದಿರುವ ಹಾಂಕಾಂಗ್ ಸರಕಾರ, ಆರೋಪಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡಲು ಅವಕಾಶ ಮಾಡಿಕೊಡುವ ಮಸೂದೆಯನ್ನು ‘ಅಮಾನತಿ’ನಲ್ಲಿಡುವುದಾಗಿ ಅಲ್ಲಿನ ಚೀನಾ ಪರ ಆಡಳಿತಗಾರ್ತಿ ಕ್ಯಾರೀ ಲ್ಯಾಮ್ ಶನಿವಾರ ಹೇಳಿದ್ದಾರೆ.

ಒಂದು ವಾರದಿಂದ ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕ್ಯಾರೀ ಲ್ಯಾಮ್ ಅಗಾಧ ಒತ್ತಡಕ್ಕೆ ಒಳಗಾಗಿದ್ದರು. ವಿವಾದಾಸ್ಪದ ಮಸೂದೆಯನ್ನು ಕೈಬಿಡುವಂತೆ ಅವರದೇ ಮಿತ್ರಪಕ್ಷಗಳು ಮತ್ತು ಸಲಹೆಗಾರರು ಒತ್ತಡ ಹೇರಿದ್ದರು.

‘‘ಶಾಸನ ತಿದ್ದುಪಡಿ ಕಾರ್ಯವನ್ನು ಅಮಾನತಿನಲ್ಲಿಡಲು, ಸಮಾಜದ ಎಲ್ಲ ಕ್ಷೇತ್ರಗಳೊಂದಿಗಿನ ನಮ್ಮ ಸಂಪರ್ಕವನ್ನು ಪುನರಾರಂಭಿಸಲು ಹಾಗೂ ಸಮಾಜದ ವಿಭಿನ್ನ ಅಭಿಪ್ರಾಯಗಳನ್ನು ಕೇಳಲು ಸರಕಾರ ನಿರ್ಧರಿಸಿದೆ’’ ಎಂದು ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲ್ಯಾಮ್ ಹೇಳಿದರು.

 ‘‘ಈ ವಿಷಯದಲ್ಲಿ ಯಾವುದೇ ಗಡುವು ವಿಧಿಸುವ ಉದ್ದೇಶವನ್ನು ನಾವು ಹೊಂದಿಲ್ಲ ಹಾಗೂ ಮುಂದಿನ ಹೆಜ್ಜೆಯನ್ನು ಇಡುವ ಮುನ್ನ ಭದ್ರತೆ ಕುರಿತ ಸಂಸದೀಯ ಸಮಿತಿಯ ಸದಸ್ಯರ ಜೊತೆ ಸಮಾಲೋಚನೆ ನಡೆಸುತ್ತೇವೆ ಎಂದು ಭರವಸೆ ನೀಡುತ್ತೇವೆ’’ ಎಂದರು.

ಕ್ಯಾರೀ ಲ್ಯಾಮ್ ತನ್ನ ಸಲಹೆಗಾರರೊಂದಿಗೆ ಶುಕ್ರವಾರ ರಾತ್ರಿ ತುರ್ತು ಸಭೆ ನಡೆಸಿದರು ಎಂಬುದಾಗಿ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ. ಚೀನಾದ ಅಧಿಕಾರಿಗಳು ಕೂಡ ಸಮೀಪದ ಶೆನ್‌ಝನ್ ನಗರದಲ್ಲಿ ಸಭೆ ಸೇರಿ ಬಿಕ್ಕಟ್ಟನ್ನು ನಿವಾರಿಸುವ ವಿಧಾನದ ಬಗ್ಗೆ ಚರ್ಚಿಸಿದರು.

ಬೃಹತ್ ಪ್ರತಿಭಟನೆಗಳು ಸೃಷ್ಟಿಸಿದ ಒತ್ತಡ

 1997ರಲ್ಲಿ ಹಾಂಕಾಂಗನ್ನು ಚೀನಾಕ್ಕೆ ಹಸ್ತಾಂತರಿಸುವುದನ್ನು ಪ್ರತಿಭಟಿಸಿ ನಡೆದ ಬೃಹತ್ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ, ಬುಧವಾರ ಗಡಿಪಾರು ಮಸೂದೆಯ ವಿರುದ್ಧ ಬೃಹತ್ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಹಾಂಕಾಂಗ್ ಸಂಸತ್ತಿನ ಮುಂಭಾಗದಲ್ಲಿ ಮತ್ತು ನಗರದ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಲಕ್ಷಾಂತರ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ರಬ್ಬರ್ ಗುಂಡುಗಳನ್ನು ಹಾರಿಸಿದರು.

ಕಳೆದ ರವಿವಾರ ಮಸೂದೆಯನ್ನು ವಿರೋಧಿಸಿ ಸುಮಾರು 14 ಲಕ್ಷ ಜನರು ಹಾಂಕಾಂಗ್‌ನ ಬೀದಿಗಳಿಗೆ ಇಳಿದಿರುವುದನ್ನು ಸ್ಮರಿಸಬಹುದಾಗಿದೆ.

ಮುಂದಿನ ರವಿವಾರ ಇನ್ನೊಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸುವ ಬಗ್ಗೆ ಸಂಘಟಕರು ಚಿಂತಿಸುತ್ತಿರುವಂತೆಯೇ, ಮಸೂದೆಯನ್ನು ಅಮಾನತಿನಲ್ಲಿಡುವ ಘೋಷಣೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News