ದಾಳಿಯ ‘ಎಲ್ಲಾ ಕಡೆಯೂ ಇರಾನ್ ಹೆಸರು ಬರೆದಿದೆ’: ಡೊನಾಲ್ಡ್ ಟ್ರಂಪ್

Update: 2019-06-15 18:17 GMT

ವಾಶಿಂಗ್ಟನ್, ಜೂ. 15: ಒಮಾನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಯ ‘ಎಲ್ಲಾ ಕಡೆಯೂ ಇರಾನ್ ಹೆಸರು ಬರೆದಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ ಹಾಗೂ ತಾನು ದಾಳಿಯಲ್ಲಿ ಭಾಗಿಯಾಗಿಲ್ಲ ಎಂಬ ಇರಾನ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

ಒಂದು ವೇಳೆ ಘರ್ಷಣೆ ಸಂಭವಿಸಿದರೆ, ಜಾಗತಿಕ ತೈಲ ಪೂರೈಕೆಗಳ ಪ್ರಮುಖ ಸಮುದ್ರ ದಾರಿಯಾಗಿರುವ ಹೋರ್ಮುಝ್ ಜಲಸಂಧಿಯನ್ನು ತಾನು ತಡೆಯಬಹುದಾಗಿದೆ ಎಂಬ ಇರಾನ್‌ನ ಹಿಂದಿನ ಬೆದರಿಕೆಯನ್ನೂ ಟ್ರಂಪ್ ತಳ್ಳಿಹಾಕಿದರು.

 ಇರಾನ್‌ನ ಗಸ್ತು ದೋಣಿಯೊಂದು ‘ಸ್ಫೋಟಗೊಳ್ಳದ ಲಿಂಪೆಟ್ ಬಾಂಬ್’ ಒಂದನ್ನು ದಾಳಿಗೊಳಗಾದ ಟ್ಯಾಂಕರ್‌ಗಳ ಪೈಕಿ ಒಂದರಿಂದ ತೆಗೆಯುವುದನ್ನು ತೋರಿಸುವ ಅಸ್ಪಷ್ಟ ವೀಡಿಯೊವೊಂದನ್ನು ಅಮೆರಿಕದ ಸೇನೆಯು ಬಿಡುಗಡೆಗೊಳಿಸಿದ ಗಂಟೆಗಳ ಬಳಿಕ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಖಚಿತ ಆರೋಪವನ್ನು ಹೊರಿಸಿದ್ದಾರೆ.

‘‘ಅದನ್ನು ಇರಾನ್ ಮಾಡಿದೆ’’ ಎಂದು ‘ಫಾಕ್ಸ್ ನ್ಯೂಸ್’ನೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು. ‘‘ಅವರೇ ಮಾಡಿದ್ದಾರೆ. ನಾವು ದೋಣಿಯನ್ನು ನೋಡಿದ್ದೇವೆ. ಒಂದು ಬಾಂಬ್ ಸ್ಫೋಟಿಸಿಲ್ಲ ಹಾಗೂ ಅದರಲ್ಲಿ ಇರಾನ್‌ನ ಹೆಸರು ಎಲ್ಲಾ ಕಡೆ ಬರೆದಿದೆ’’ ಎಂದರು.

ಅಮೆರಿಕದ ಆರೋಪಗಳನ್ನು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಈಗಾಗಲೇ ನಿರಾಕರಿಸಿದ್ದಾರೆ.

ಅದೇ ವೇಳೆ, ದಾಳಿಯ ಬಗ್ಗೆ ತನಿಖೆ ನಡೆಯಬೇಕು ಎಂಬುದಾಗಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News