​ವಿಶ್ವಕಪ್: ಸೋಲಿನ ಸರಪಣಿ ಕಳಚಿಕೊಂಡ ದಕ್ಷಿಣ ಆಫ್ರಿಕಾ

Update: 2019-06-16 04:02 GMT

ಕಾರ್ಡಿಫ್: ಅಪ್ಘಾನಿಸ್ತಾನ ತಂಡದ ವಿರುದ್ಧ ಒಂಬತ್ತು ವಿಕೆಟ್‌ಗಳ ಸುಲಭ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ನಲ್ಲಿ ಸೋಲಿನ ಸರಪಣಿ ಕಳಚಿಕೊಂಡಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾದ ಸೆಮಿಫೈನಲ್ ಆಸೆ ಜೀವಂತವಾಗಿ ಉಳಿದಿದೆ.

ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ 29 ರನ್‌ಗಳಿಗೆ 4 ವಿಕೆಟ್ ಕಬಳಿಸಿ ಎದುರಾಳಿಗಳನ್ನು 125 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ರಿಸ್ ಮಾರಿಸ್ 13 ರನ್ನುಗಳಿಗೆ 3 ವಿಕೆಟ್ ಕಬಳಿಸಿದರೆ, ಪೆಹ್ಲೂವಾಯೊ ಎರಡು ವಿಕೆಟ್ ಗಳಿಸಿದರು.

ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ 48 ಓವರ್‌ಗಳಲ್ಲಿ 127 ರನ್ ಗಳಿಸುವ ಗುರಿ ನಿಗದಿಪಡಿಸಲಾಯಿತು. ಇನ್ನೂ 19 ಓವರ್‌ಗಳು ಬಾಕಿ ಇದ್ದಾಗಲೇ ಹರಿಣ ಪಡೆ ಒಂದು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಹಶೀಮ್ ಆಮ್ಲ ಮತ್ತು ಕ್ವಿಂಟನ್ ಡಿಕಾಕ್ ಆರಂಭಿಕ ವಿಕೆಟ್‌ಗೆ 104 ರನ್‌ಗಳನ್ನು ಸೇರಿಸಿದರು. ಡಿಕಾಕ್ 68 ರನ್ ಗಳಿಸಿ ಔಟ್ ಆದರು. ಆಮ್ಲ (ನಾಟೌಟ್ 41) ಹಾಗೂ ಪೆಹ್ಲೂವಾಯೊ (ನಾಟೌಟ್ 17) ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು.

ಸತತ ಮೂರು ಸೋಲಿನ ಬಳಿಕ ನಾಲ್ಕನೇ ಪಂದ್ಯ ಮಳೆ ಕಾರಣದಿಂದಾಗಿ ರದ್ದಾಗಿದ್ದರಿಂದ ದಕ್ಷಿಣ ಆಫ್ರಿಕಾಗೆ ಶನಿವಾರದ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News