ಉಪ್ಪಿನಂಗಡಿ: ಚರಂಡಿ ಕಾಮಗಾರಿ, ದಾರಿ ದೀಪ ಅಳವಡಿಕೆಗೆ ಮೀನಾ- ಮೇಷ 'ಫೋನ್ ಕಾಲ್ ಅಭಿಯಾನ'

Update: 2019-06-16 05:57 GMT
ನಮ್ಮೂರು - ನೆಕ್ಕಿಲಾಡಿ ಪ್ರಧಾನ ಕಾರ್ಯದರ್ಶಿ ಅನಿ ಮಿನೇಜಸ್ ರನ್ನು ಸನ್ಮಾನಿಸಲಾಯಿತು

ಉಪ್ಪಿನಂಗಡಿ: ಚರಂಡಿ ದುರಸ್ತಿ, ದಾರಿ ದೀಪಗಳ ಅಳವಡಿಕೆಗೆ 34 ನೆಕ್ಕಿಲಾಡಿ ಗ್ರಾ.ಪಂ. ಮೀನಾ- ಮೇಷ ಎಣಿಸುತ್ತಿದ್ದು, ಕಾಮಗಾರಿಯನ್ನು ಪಂಚಾಯತ್‍ ಆರಂಭಿಸುವವರೆಗೆ ಪ್ರತಿಭಟನೆ ಹಾಗೂ ತಾ.ಪಂ. ಇಒ, ಸಿಇಒ ಹಾಗೂ ಪಂಚಾಯತ್‍ ರಾಜ್ ಇಲಾಖೆಯ ಆಯುಕ್ತರ ಮೊಬೈಲ್‍ಗಳಿಗೆ ನಿರಂತರವಾಗಿ ಕರೆ ಮಾಡಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಒತ್ತಾಯಿಸುವ ಮೂಲಕ 'ಫೋನ್ ಕಾಲ್ ಅಭಿಯಾನ' ನಡೆಸಲಾಗುವುದು ಎಂದು ನಮ್ಮೂರು- ನೆಕ್ಕಿಲಾಡಿ ಸಂಘಟನೆ ತಿಳಿಸಿದೆ.

34ನೇ ನೆಕ್ಕಿಲಾಡಿಯ ಯುನಿಕ್ ಕೌಂಪಾಂಡ್‍ನಲ್ಲಿ ಶನಿವಾರ ನಡೆದ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಿನ್ನಡೆಯಾಗುತ್ತಿರುವುದು ಚರ್ಚೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, ಮಳೆಗಾಲಕ್ಕೆ ಪೂರ್ವಭಾವಿಯಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಗಬೇಕಿದ್ದ ಚರಂಡಿ ಕಾಮಗಾರಿ ಮಳೆಗಾಲ ಆರಂಭವಾದರೂ ಇನ್ನೂ ಆಗಿಲ್ಲ. ಹಲವು ಕಡೆ ಚರಂಡಿ ಗಿಡ, ಗಂಟಿಗಳಿಂದ ಆವರಿಸಿಕೊಂಡು ಹೂಳು ತುಂಬಿದೆ. ಇನ್ನು ಕೆಲವು ಕಡೆ ಚರಂಡಿಯೇ ಇಲ್ಲ. ಹಾಗಾರಿ ರಸ್ತೆಯಲ್ಲೇ ನೀರು ಹರಿದು ಹೋಗಬೇಕಾದ ಸ್ಥಿತಿಯಿದೆ. ಅಲ್ಲಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಇನ್ನು ಗ್ರಾ.ಪಂ. ವ್ಯಾಪ್ತಿಯಲ್ಲಿ ದಾರಿ ದೀಪದ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೆಚ್ಚಿನ ದಾರಿ ದೀಪಗಳು ಉರಿಯುತ್ತಿಲ್ಲ. ಈ ಬಗ್ಗೆ ಗ್ರಾ.ಪಂ. ಸದಸ್ಯರಲ್ಲಿ ಹೇಳಿದಾಗ ಕ್ರಿಯಾಯೋಜನೆಯ ಬಳಿಕ ಇದರ ಕಾಮಗಾರಿ ನಡೆಸುವುದು ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಮೂರ್ನಾಲ್ಕು ದಿನಗಳೊಳಗೆ ಕ್ರಿಯಾಯೋಜನೆಗೆ ಸಭೆ ಕರೆಯುವುದೆಂದು ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಭೆಯನ್ನು ಇನ್ನೂ ಕರೆದಿಲ್ಲ. ಅಧಿಕಾರಿಗಳಲ್ಲಿ ಈ ಬಗ್ಗೆ ಕೇಳಿದರೆ ಇಲ್ಲಸಲ್ಲದ ಕಾರಣ ಹೇಳಿ ನುಣುಚಿಕೊಳ್ಳುತ್ತಾರೆ ಎಂದು ಉತ್ತರಿಸುತ್ತಿದ್ದಾರೆ ಎಂದರು.

34ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಅಗತ್ಯ ಕಾಮಗಾರಿಗಳಾದ ಚರಂಡಿ ಹಾಗೂ ದಾರಿದೀಪ ವ್ಯವಸ್ಥೆಯನ್ನು ಶೀಘ್ರವಾಗಿ ನಡೆಸುವಂತೆ ಆಗ್ರಹಿಸಿ ನಮ್ಮೂರು- ನೆಕ್ಕಿಲಾಡಿ ಸಂಘಟನೆಯ ವತಿಯಿಂದ ಗ್ರಾಮಸ್ಥರನ್ನು ಕ್ರೂಢೀಕರಿಸಿಕೊಂಡು ಮೊದಲಿಗೆ ಗ್ರಾ.ಪಂ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ನೀಡುವುದು. ಅದರಲ್ಲಿ ನೀಡಿದ ಗಡುವಿನೊಳಗೆ ಕಾಮಗಾರಿ ಆರಂಭವಾಗದಿದ್ದರೆ ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಿ ಕಾಮಗಾರಿ ಆರಂಭಿಸಲು ಗಡುವು ನೀಡಲಾಗುವುದು. ಬಳಿಕವೂ ಕಾಮಗಾರಿ ಆರಂಭಿಸದಿದ್ದಲ್ಲಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರ ಮೊಬೈಲ್  ಗೆ ಗ್ರಾಮಸ್ಥರೆಲ್ಲಾ ನಿರಂತರ ಕರೆ ಮಾಡಿ 34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿ ಹಾಗೂ ದಾರಿ ದೀಪದ ಕಾಮಗಾರಿ ನಡೆಸುವಂತೆ ಒತ್ತಾಯಿಸಲಾಗುವುದು. ಇದು ಕಾಮಗಾರಿ ಆರಂಭಿಸುವಲ್ಲಿಯವರೆಗೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

34ನೇ ನೆಕ್ಕಿಲಾಡಿ ಗ್ರಾ.ಪಂ. ಉಪಚುನಾವಣೆಯಲ್ಲಿ ಚುನಾಯಿತರಾಗಿ ಗ್ರಾ.ಪಂ. ಸದಸ್ಯೆಯಾಗಿ ಆಯ್ಕೆಯಾದ ನಮ್ಮೂರು - ನೆಕ್ಕಿಲಾಡಿ ಪ್ರಧಾನ ಕಾರ್ಯದರ್ಶಿ ಅನಿ ಮಿನೇಜಸ್ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. 

ಸಭೆಯಲ್ಲಿ ಕೋಶಾಧಿಕಾರಿ ಶಿವಕುಮಾರ್ ಬಾರಿತ್ತಾಯ, ಸಂಘಟನಾ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಜೊತೆ ಕಾರ್ಯದರ್ಶಿಗಳಾದ ವಿನೀತ್ ಶಗ್ರಿತ್ತಾಯ, ಅಝೀಝ್ ಪಿ.ಟಿ., ಸದಸ್ಯರಾದ ಶಬೀರ್, ಸತ್ಯವತಿ, ಅಮಿತಾ ಹರೀಶ್, ಖಲಂದರ್ ಶಾಫಿ ಮತ್ತಿತರರು ಉಪಸ್ಥಿತರಿದ್ದು, ಸಲಹೆ- ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News