ಪ. ಬಂಗಾಳ: ವೈದ್ಯರು ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದರೂ ಯಾವುದೇ ಕ್ರಮವಿಲ್ಲ

Update: 2019-06-16 08:30 GMT
ಫೋಟೊ ಕೃಪೆ: indianexpress.com

ಪಶ್ಚಿಮ ಬಂಗಾಳ, ಜೂ.16: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ನಡೆಸುತ್ತಿರುವ ವೈದ್ಯರ ಮುಷ್ಕರ ರವಿವಾರ ಆರನೇ ದಿನಕ್ಕೆ ಕಾಲಿಟ್ಟಿದೆ. ಮಸೂದ್ ಸಯೀದ್ (75) ಎಂಬವರ ಸಾವಿನ ನಂತರ ಅವರ ಮನೆಯವರು ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ವಿರೋಧಿಸಿ ರಾಜ್ಯಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿ ಸಯೀದ್ ಅವರ ನೆರೆಯವರನ್ನು ಬಂಧಿಸಿದರೂ, ತಮ್ಮ ಮೇಲೆ ಹಲ್ಲೆ ನಡೆಸಿದ ಯಾವುದೇ ವೈದ್ಯರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಈ ಘಟನೆಗೆ ಕೋಮು ಲೇಪ ಬಳಿಯುವ ಹುನ್ನಾರ ನಡೆದಿದೆ ಎಂದೂ ಅವರು ದೂರಿದ್ದಾರೆ.

"ನಾವು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇವೆ. ವೈದ್ಯರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಸಿಸಿಟಿವಿ ದೃಶ್ಯಾವಳಿಯ ಸಾಕ್ಷಿ ಇದೆ. ಪ್ರತಿ ನಾಗರಿಕರಿಗೂ ನ್ಯಾಯ ಸಿಗುವಂತಾಗಬೇಕು. ನಮ್ಮ ಐದು ಮಂದಿ ನೆರೆಯವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಆದರೆ ವೈದ್ಯರನ್ನು ಏಕೆ ಬಂಧಿಸಿಲ್ಲ" ಎಂದು ಕುಟುಂಬದವರು ಪ್ರಶ್ನಿಸಿದ್ದಾರೆ.

ಅವರು ನಮ್ಮ ನೆರೆಯವರೇ ಆಗಿರಲಿ ಅಥವಾ ವೈದ್ಯರೇ ಆಗಿರಲಿ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಕಲ್ಲೇಟಿನಿಂದ ಗಾಯಗೊಂಡಿರುವ ವೈದ್ಯರ ಬಗ್ಗೆ ನಮಗೆ ಬೇಸರವಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ ವೈದ್ಯರು ಪ್ರತಿಭಟನೆ ಹಿಂದಕ್ಕೆ ಪಡೆಯಬೇಕು. ಸಾವಿರಾರು ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಯೀದ್ ಅವರ ಮೊಮ್ಮಗ ತಯ್ಯಬ್ ಹುಸೈನ್ ಆಗ್ರಹಿಸಿದ್ದಾರೆ.

ಸಯೀದ್ ಸಾವಿನ ಹಿನ್ನೆಲೆಯಲ್ಲಿ ಕಿರಿಯ ವೈದ್ಯರು ಮತ್ತು ರೋಗಿಯ ಸಂಬಂಧಿಕರ ನಡುವೆ ಘರ್ಷಣೆ ಸಂಭವಿಸಿ ಕಿರಿಯ ವೈದ್ಯರೊಬ್ಬರಿಗೆ ತೀವ್ರ ಗಾಯಗಳಾಗಿದ್ದವು. ಈ ಹಿಂಸಾಚಾರದ ಬಳಿಕ ಕಿರಿಯ ವೈದ್ಯರು ಕೆಲಸ ಕಾರ್ಯ ಸ್ಥಗಿತಗೊಳಿಸಿದ್ದರು. 13 ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕಿರಿಯ ವೈದ್ಯರ ಮುಷ್ಕರ ಬೆಂಬಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News