ಮಂಗಳೂರು: ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛ ಶ್ರಮದಾನ

Update: 2019-06-16 12:47 GMT

ಮಂಗಳೂರು, ಜೂ.16: ಅಂತರಂಗ ಶುದ್ಧವಾಗದೇ ಬಹಿರಂಗದ ಪರಿಸರ ಸ್ವಚ್ಛವಾಗದು. ಜನರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಬೇಕು. ಸ್ವಚ್ಛತಾ ಅಭಿಯಾನಗಳು ಮಾಡುತ್ತಿರುವ ಈ ಕಾರ್ಯವು ಕರ್ಮಯೋಗಕ್ಕೆ ಸಮಾನವಾದುದು ಎಂದು ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ತಿಳಿಸಿದ್ದಾರೆ.

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ನಗರದ ಬೋಳೂರು ಪ್ರದೇಶದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ 28ನೇ ಶ್ರಮದಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಿಸ್ವಾರ್ಥದಿಂದ ಮಾಡಿದ ಯಾವುದೇ ಕಾರ್ಯಕ್ಕೆ ಉನ್ನತವಾದ ಪ್ರತಿಫಲ ದೊರೆಯುತ್ತದೆ. ಇಂದಿನ ಒತ್ತಡದ ಜೀವನ ಕ್ರಮದ ನಡುವೆಯೂ ಜನಸೇವೆಗೆ ಸಮಯ ಮೀಸಲಿಡುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲದೇ ಸಮಾನ ಮನಸ್ಕ ವ್ಯಕ್ತಿಗಳು ಹಾಗೂ ಸಂಘಟನೆಗಳು ಒಂದೆಡೆ ಸೇರಿ ಶ್ರಮದಾನ ಮಾಡುತ್ತಿರುವುದು ಇದಕ್ಕೆ ಮತ್ತಷ್ಟು ಮೆರಗು ನೀಡಿದೆ’ ಎಂದರು.

ಈ ಸಂದರ್ಭ ಮನಪಾ ಆರೋಗ್ಯ ನಿರೀಕ್ಷಕಿ ಆಶ್ವಿನಿ, ದಾಮೋದರ್ ಭಟ್, ಪ್ರಶಾಂತ ಪಿ., ಸೂರಜ್ ಸೋಲಂಕಿ, ಸುರೇಶ್ ಅಮೀನ್, ಎ.ವಿ. ಸುಗುಣನ್, ರಾಜನ್, ಪ್ರಸಾದರಾಜ್ ಕಾಂಚನ್, ಶ್ರುತಿ ಹೆಗ್ಡೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಸ್ವಚ್ಛತೆ: ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಎದುರು ರಸ್ತೆಯಿಂದ ಬೊಕ್ಕಪಟ್ಣ ಸಾಗುವ ರಸ್ತೆಯಲ್ಲಿರುವ ಸುಮಾರು 10ಕ್ಕೂ ಅಧಿಕ ತ್ಯಾಜ್ಯ ಸುರಿಯುತ್ತಿದ್ದ ಜಾಗಗಳನ್ನು ಗುರುತಿಸಿ, ಸ್ವಚ್ಛಗೊಳಿಸಲಾಯಿತು. ಎಂಟು ತಂಡಗಳನ್ನು ರಚಿಸಿಕೊಂಡು ಶ್ರಮದಾನ ಮಾಡಲಾಯಿತು.

ದಿಲ್‌ರಾಜ್ ಆಳ್ವ, ಸುಧೀರ್ ವಾಮಂಜೂರು, ಬಾಲಕೃಷ್ಣ ಭಟ್, ಜಯಕೃಷ್ಣ ಬೇಕಲ್, ಸಂದೀಪ್ ಕೋಡಿಕಲ್, ಪ್ರವೀಣ ಶೆಟ್ಟಿ, ಭರತ್ ಸದಾನಂದ, ಅವಿನಾಶ್ ಅಂಚನ್ ನೇತೃತ್ವದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.

ಮನೆ ತ್ಯಾಜ್ಯದ ಜತೆಗೆ ಕಲ್ಲುಮಣ್ಣುಗಳ ರಾಶಿ, ಪ್ಲಾಸ್ಟಿಕ್ ಚೀಲಗಳ ರಾಶಿಗಳು ಇಡೀ ಪರಿಸರವನ್ನು ಗಲೀಜುಗೊಳಿಸಿದ್ದವು. ಕೆಲವು ಸ್ಥಳಿಯರು ತ್ಯಾಜ್ಯ ಬಿಸಾಡುವುದನ್ನು ತಡೆಯಲು ಪ್ರಯತ್ನಿಸಿದಾಗಲೂ ಸಫಲತೆ ಕಂಡಿರಲಿಲ್ಲ. ಇದೀಗ ಅಲ್ಲಿದ್ದ ಸುಮಾರು ಮೂರು ಟಿಪ್ಪರ್ ಕಸವನ್ನು ತೆಗೆದು ಆಲಂಕಾರಿಕ ಗಿಡಗಳನ್ನಿಟ್ಟು ಮತ್ತೆ ಅಲ್ಲಿ ತ್ಯಾಜ್ಯ ಬಿಸಾಡದಂತೆ ಮಾಡಲಾಗಿದೆ.

ಸರಿತಾ ಶೆಟ್ಟಿ ಹಾಗೂ ಕೋಡಂಗೆ ಬಾಲಕೃಷ್ಣ ನಾಕ್ ಮಾರ್ಗದರ್ಶನದಲ್ಲಿ ರಸ್ತೆಯ ಬದಿಗಳಲ್ಲಿ ಗಿಡಗಳನ್ನು ನೆಡಲಾಯಿತು. ಶ್ರಮದಾನದ ಜೊತೆಗೆ ಸುಭೋದಯ ಆಳ್ವ ಹಾಗೂ ಯುವ ಕಾರ್ಯಕರ್ತರು ಬೋಳೂರು ಪರಿಸರದ ಮನೆಗಳಿಗೆ ತೆರಳಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನಡೆಸಿದರು. ಮಾರ್ಗಬದಿಯಲ್ಲಿ ತ್ಯಾಜ್ಯ ಸುರಿಯದಂತೆ ಅವರನ್ನು ವಿನಂತಿಸಲಾಯಿತು. ಮಾತಾ ಅಮೃತಾನಂದಮಯಿ ಮಠದ ‘ಆಯುಧ’ ಸಂಘಟನೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು.

ಸ್ವಚ್ಛ ಗ್ರಾಮ ಅಭಿಯಾನ: ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ದ.ಕ. ಜಿಪಂ ಸಹಯೋಗದಲ್ಲಿ ಸುಮಾರು 75ಕ್ಕೂ ಅಧಿಕ ಗ್ರಾಮಗಳಲ್ಲಿ ಶ್ರಮದಾನ ಹಮ್ಮಿಕೊಳ್ಳಲಾಯಿತು. ಶ್ರಮದಾನದ ಪ್ರಯುಕ್ತ ಗ್ರಾಮಗಳಲ್ಲಿ ರಸ್ತೆಗಳ ಸ್ವಚ್ಛತೆ, ತೊಡುಗಳಲ್ಲಿದ್ದ ತ್ಯಾಜ್ಯ ತೆರವು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.

ಜಿಪಂ ಸ್ವಚ್ಛ ಭಾರತ್ ಮಿಷನ್ ಸಂಯೋಜಕಿ ಮಂಜುಳಾ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಸಂಯೋಜಕ ಸುಧೀರ್ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News