ಪುತ್ತೂರು: 11 ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Update: 2019-06-16 12:50 GMT

ಪುತ್ತೂರು: ವೈಯಕ್ತಿಕ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಪಾಲು ಬಹಳಷ್ಟಿದ್ದು,  ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಕಾರ ಮತ್ತು ಪ್ರೇರಣೆ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಕಾರ್ಯ ಯೋಜನೆಯ ಮೂಲಕ ನಡೆಯುತ್ತಿದೆ ಎಂದು ಜನಜಾಗೃತಿ ವೇದಿಕೆ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಪುತ್ತೂರು ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಹೇಳಿದರು.

ಅವರು ತೆಂಕಿಲ ಸ್ವಾಮಿ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಪುತ್ತೂರು ವಲಯ ಇದರ 11 ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

2002 -03 ನೇ ಸಾಲಿನಲ್ಲಿ ಪುತ್ತೂರಿನಲ್ಲಿ ಆರಂಭಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ನಗರ ಪ್ರದೇಶದಲ್ಲೇ 3800 ಸದಸ್ಯರಿದ್ದಾರೆ. ಹತ್ತು ಮನಸ್ಸುಗಳು ಇಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಎಲ್ಲಾ ಚಟುವಟಿಕೆಗಳು, ಉದ್ದೇಶ ಯಶಸ್ಸಿನೆಡೆಗೆ ಸಾಗಿಬಂದಿದೆ ಎಂದರು.

ಯೋಜನೆಯ ಪ್ರೇರಣೆಯಿಂದ ಇಂದು ಎಲ್ಲಾ ಕಡೆ ಭಜನಮಂದಿರ, ದೇವಸ್ಥಾನಗಳು ಅಭಿವೃದ್ಧಿಗೊಂಡಿವೆ. ಪ್ರತಿ ಊರಿನಲ್ಲಿ ನಿತ್ಯ ಚಟುವಟಿಕೆಗಳು ನಡೆಯುತ್ತಿವೆ. ಮನೆ, ಊರು, ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಸಾಲವನ್ನು ಸರಳಗೊಳಿಸಿದ, ಬ್ಯಾಂಕ್ ವ್ಯವಹಾರವನ್ನು ಪ್ರತಿಯೊಬ್ಬರಿಗೂ ಪರಿಚಯಿಸಿ ಮಹಿಳೆಯರ ಸಹಿತ ಜನಸಾಮಾನ್ಯರ ಸ್ವಾವಲಂಭನೆಯಲ್ಲಿ ಯೋಜನೆಯ ಪಾತ್ರ ಅತಿ ಮುಖ್ಯವೆನಿಸಿದೆ ಎಂದು ಹೇಳಿದರು.

ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮಾತನಾಡಿ 38 ವರ್ಷಗಳ ಹಿಂದೆ ಆರಂಭಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶ್ರಮ, ಸಮಯಪಾಲನೆ, ಜವಾಬ್ದಾರಿಯ ಕೆಲಸದಿಂದ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ನಮ್ಮ ಸಂಘ, ಸಂಘ ಯಾಕೆ ಬೇಕು ಎನ್ನುವ ಕಲ್ಪನೆ ನಮ್ಮಲ್ಲಿದ್ದಾಗ ಬೆಳವಣಿಗೆ ಸಾಧ್ಯವಾಗುತ್ತದೆ. ಕೃಷಿ, ಸ್ವೋದ್ಯೋಗಕ್ಕೆ ಯೋಜನೆಯು ಬಹಳಷ್ಟು ಪ್ರಾಧಾನ್ಯತೆ ನೀಡಿದೆ ಎಂದರು.

ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಮಾತನಾಡಿ ಅನೇಕರ ಬದುಕಿನಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ. ಪ್ರತಿಯೊಬ್ಬರ ಸಾಧನೆಯ ಹಿಂದೆಯೂ ಯಶೋಗಾಥೆ ಇರುತ್ತದೆ. ಅಂತಹ ಹಲವರ ಯಶೋಗಾಥೆಗೆ ಯೋಜನೆ ಕಾರಣವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುತ್ತೂರು ವಲಯದ 11 ಒಕ್ಕೂಟಗಳ ನೂತನ ಪದಾ„ಕಾರಿಗಳ ಪದಗ್ರಹಣ ನಡೆಯಿತು. ಬನ್ನೂರು ಒಕ್ಕೂಟದ ಅಧ್ಯಕ್ಷರಾಗಿ ಸತೀಶ್ ಕೆ., ಕಬಕ ಒಕ್ಕೂಟದ ಅಧ್ಯಕ್ಷರಾಗಿ ಚಂದ್ರಶೇಖರ ಗೌಡ, ಕೊಡಿಪ್ಪಾಡಿಗೆ ಹರಿಕೃಷ್ಣ, ಕಸಬಾ ಒಕ್ಕೂಟಕ್ಕೆ ಧನೇಶ್ವರಿ, ಬನ್ನೂರು ಪಡ್ನೂರು ಒಕ್ಕೂಟದ ಅಧ್ಯಕ್ಷರಾಗಿ ಮಹಾಬಲ ಪೂಜಾರಿ, ಬಪ್ಪಳಿಗೆಗೆ ದೀಕ್ಷಾ ಪೈ, ಸ್ವರ್ಣಶ್ರೀ ಒಕ್ಕೂಟಕ್ಕೆ ಜಯರಾಮ ಕುಲಾಲ್, ಕೆಮ್ಮಿಂಜೆಗೆ ದಿಲೀಪ್ ಕುಮಾರ್, ಚಿಕ್ಕಮುಡ್ನೂರಿಗೆ ಗಣೇಶ್ ಭಂಡಾರ್‍ಕರ್, ಪಡ್ನೂರಿಗೆ ಮೋಹನ್‍ದಾಸ್, ಪರ್ಲಡ್ಕಕ್ಕೆ ಧರ್ಮೇಂದ್ರ ಅವರು ಅಧ್ಯಕ್ಷರಾಗಿ ಹಾಗೂ ಪದಾಧಿಕಾರಿಗಳಿಗೆ ನಿಕಟಪೂರ್ವ ಪದಾಧಿಕಾರಿಗಳು ಅಧಿಕಾರ ಹಸ್ತಾಂತರಿಸಿದರು.

ಪುತ್ತೂರು ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಯೋಜನೆಯ ಪುತ್ತೂರು ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ನಗರಸಭಾ ಸದಸ್ಯೆ ದೀಕ್ಷಾ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್. ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಪಾವನಾ ವರದಿ ವಾಚಿಸಿದರು. ನೆಲ್ಯಾಡಿ ವಲಯ ಮೇಲ್ವಿಚಾರಕ ಸಂದೇಶ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News