ಖಶೋಗಿ ಹತ್ಯೆಯನ್ನು ರಾಜಕೀಯ ಲಾಭಕ್ಕೆ ಬಳಸದಂತೆ ಸೌದಿ ರಾಜಕುಮಾರ ಎಚ್ಚರಿಕೆ

Update: 2019-06-16 14:00 GMT

 ರಿಯಾದ್,ಜೂ.16: ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸದಿರುವಂತೆ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಎಚ್ಚರಿಕೆ ನೀಡಿದ್ದಾರೆ. ಟರ್ಕಿಯನ್ನು ಗುರಿಯಾಗಿಸಿ ಈ ಹೇಳಿಕೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಅಕ್ಟೋಬರ್ ‌ನಲ್ಲಿ ಇಸ್ತಾನ್‌ ಬುಲ್ ‌ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಖಶೋಗಿಯನ್ನು ಭಯಾನಕ ರೀತಿಯಲ್ಲಿ ಹತ್ಯೆ ಮಾಡಿದ ನಂತರ ಟರ್ಕಿ ಮತ್ತು ಸೌದಿ ಅರೇಬಿಯದ ಸಂಬಂಧದಲ್ಲಿ ಬಿರುಕು ಮೂಡಿತ್ತು. ಈ ಘಟನೆಯಿಂದ ಸೌದಿ ರಾಜಕುಮಾರನ ಘನತೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕುಂದುಂಟಾಗಿತ್ತು. ಹತ್ಯೆಯ ಬಗ್ಗೆ ಮೊದಲು ವರದಿ ಮಾಡಿದ್ದ ಟರ್ಕಿಯ ಅಧಿಕಾರಿಗಳು ಖಶೋಗಿಯವರ ದೇಹದಿಂದ ಬೇರ್ಪಡಿಸಲ್ಪಟ್ಟ ಇನ್ನೂ ಸಿಗದ ಭಾಗಗಳು ಎಲ್ಲಿವೆ ಎಂಬ ಬಗ್ಗೆ ತಿಳಿಸುವಂತೆ ಸೌದಿ ಅರೇಬಿಯದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ.

ಜಮಾಲ್ ಖಶೋಗಿಯವರ ಹತ್ಯೆ ಅತ್ಯಂತ ದುಃಖಕರ ವಿಷಯವಾಗಿದೆ. ಆದರೆ ಯಾರೂ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಮತ್ತು ಸೌದಿ ನ್ಯಾಯಾಲಯಕ್ಕೆ ಸಾಕ್ಷಿಯನ್ನು ಒದಗಿಸಬೇಕು. ನ್ಯಾಯಾಲಯ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಎಂದು ರವಿವಾರ ಅರಬ್ ದಿನಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಸೌದಿ ರಾಜಕುಮಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News