ಸಮಾಜದ ಏಳಿಗೆಗೂ ಕೊಡುಗೆ ನೀಡಿ: ಕೃಷ್ಣಮೂರ್ತಿ ಭಟ್

Update: 2019-06-16 14:19 GMT

ಉಡುಪಿ, ಜೂ.16: ಸಮಾಜವೊಂದು ಸರ್ವತೋಮುಖ ಏಳಿಗೆ ಕಾಣಲು ಸಮಾಜಬಾಂಧವರು ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು ಎಂದು ಕೇಂದ್ರ ಒಎನ್‌ಜಿಸಿಯ ನಿವೃತ್ತ ಡಿಜಿಎಂ ಕೃಷ್ಣಮೂರ್ತಿ ಭಟ್ ಹೇಳಿದ್ದಾರೆ.

ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ, ಮುದರಂಗಡಿ ಸಮರ್ಪಣ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದೊಂದಿಗೆ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ರವಿವಾರ ಆಯೋಜಿಸಿದ ವಿದ್ಯಾಪೋಷಕ್ ನಿಧಿ 2019-20ರ ವಿದ್ಯಾರ್ಥಿವೇತನ ವಿತರಣೆ ಹಾಗೂ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು.

ನಾವು ಕೇವಲ ಹಣಕ್ಕೆ ಮಾತ್ರ ಪ್ರಾಮುಖ್ಯತೆ ನೀಡದೇ, ಸಮಾಜದಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಾವು ಸಂಪಾದಿಸಿದ್ದರಲ್ಲಿ ಒಂದು ಭಾಗವನ್ನು ಸಮಾಜಕ್ಕೆ ನೀಡಲು ಮನಸ್ಸು ಮಾಡಬೇಕು. ಸಮಾಜಕ್ಕೆ ನಿಮ್ಮ ಸೇವೆಯ ಅಗತ್ಯವಿದೆ ಎಂದವರು ಹೇಳಿದರು.

ಸಮಾಜದಲ್ಲಿ ನಾವು ದೇವರು, ಗುರುಗಳು, ಹಿರಿಯರಿಗೆ ವಿಶೇಷ ಗೌರವ ನೀಡುತ್ತೇವೆ. ಇದನ್ನು ನಮ್ಮ ಮಕ್ಕಳಿಗೂ ಕಲಿಸಿಕೊಡಬೇಕು. ಪರಸ್ಪರ ವಿಶ್ವಾಸ, ನಂಬಿಕೆಯನ್ನು ಕಲಿಸಿಕೊಡಿ. ಮಕ್ಕಳ ಬಗ್ಗೆ ವಿಶೇಷ ಮಮಕಾರ ತೋರಿಸಬೇಡಿ. ಅವರಿಗೂ ಕಷ್ಟಸುಖಗಳ ಅನುಭವವಾಗಲಿ. ಇದರಿಂದ ಅವರ ಜೀವನ ಪರಿಪಕ್ವವಾಗುತ್ತದೆ ಎಂದು ಕೃಷ್ಣಮೂರ್ತಿ ಭಟ್ ನುಡಿದರು.

ಸುಪ್ರೀಂ ಕೋರ್ಟಿನ ನ್ಯಾಯವಾದಿ ಮುಂಬೈಯ ಎಂ.ವಿ.ಕಿಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲದ ಉದ್ಯಮಿ ಎಚ್.ದಾಮೋದರ ನಾಯಕ್ ಹಾಗೂ ಕುಂದಾಪುರದ ನ್ಯಾಯವಾದಿ ಮುರ್ಡೇಶ್ವರ ರವಿಕಿರಣ್ ಶ್ಯಾನುಭೋಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮರ್ಪಣಾ ಚಾರಿಟೇಬಲ್ ಟ್ರಸ್ಟ್‌ನ ರತ್ನಾಕರ ಕಾಮತ್, ಲಕ್ಷ್ಮೀ ರತ್ನಾಕರ ಕಾಮತ್, ನಿವೃತ್ತ ಸೈನಿಕ ಭಾಸ್ಕರ ಕಿಣಿ, ಬೆಂಗಳೂರಿನ ವಿಜಯಕುಮಾರ್ ಶೆಣೈ, ಪಡುಬಿದ್ರಿಯ ನಾರಾಯಣಿ ಶರ್ಮ, ಭಾಗೀರಥಿ ಕಿಣಿ, ಶ್ರೀಮತಿ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯ ಜಿಲ್ಲಾಧ್ಯಕ್ಷ ಸತೀಶ್ ಹೆಗ್ಡೆ ಕೋಟ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News