ನ್ಯೂಯಾರ್ಕ್ ಟೈಮ್ಸ್‌ನ ರಶ್ಯ ವರದಿ ವಸ್ತುತಃ ದೇಶದ್ರೋಹ: ಡೊನಾಲ್ಡ್ ಟ್ರಂಪ್

Update: 2019-06-16 14:34 GMT

ವಾಶಿಂಗ್ಟನ್, ಜೂ.16: ರಶ್ಯದ ವಿದ್ಯುತ್ ಗ್ರಿಡ್‌ಗಳ ಮೇಲೆ ಅಮೆರಿಕ ಡಿಜಿಟಲ್ ಆಕ್ರಮಣ ಮಾಡಲು ಮುಂದಾಗಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿ ವಸ್ತುತಃ ದೇಶದ್ರೋಹವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

 ರಶ್ಯದ ವಿದ್ಯುತ್ ಗ್ರಿಡ್‌ಗಳು ಮತ್ತು ಇತರ ಗುರಿಗಳ ಒಳಗೆ ಅಮೆರಿಕನ್ ಕಂಪ್ಯೂಟರ್ ಕೋಡ್‌ಗಳ ವರ್ಗೀಕೃತ ಅಳವಡಿಕೆಯ ಬಗ್ಗೆ ಹಾಲಿ ಮತ್ತು ಮಾಜಿ ಸರಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿತ್ತು. ಈ ಆರೋಪವನ್ನು ತಳ್ಳಿ ಹಾಕಿರುವ ಟ್ರಂಪ್, ಮಾಧ್ಯಮವನ್ನು ಭ್ರಷ್ಟ ಎಂದು ಜರೆಯುವುದರ ಜೊತೆಗೆ ತಾನು ಈ ಹಿಂದೆ ನೀಡಿದ್ದ, ಪತ್ರಕರ್ತರು ಜನರ ಶತ್ರುಗಳು ಎಂಬ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.

 “ರಶ್ಯದ ಮೇಲೆ ಅಮೆರಿಕ ಸೈಬರ್ ದಾಳಿಯನ್ನು ಅಧಿಕಗೊಳಿಸಿದೆ ಎಂದು ವಿಫಲಗೊಳ್ಳುತ್ತಿರುವ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಮಾಡಿರುವ ವರದಿಯನ್ನು ನೀವು ನಂಬುತ್ತೀರಾ?” ಎಂದು ಅವರು ಪ್ರಶ್ನಿಸಿದ್ದಾರೆ. ಟ್ರಂಪ್‌ ಚುನಾವಣಾ ಅಭಿಯಾನಕ್ಕೆ ಲಾಭ ತರುವ ಉದ್ದೇಶದಿಂದ ರಶ್ಯದ ಜಿಆರ್‌ಯು ಗುಪ್ತಚರ ಸಂಸ್ಥೆ ನಡೆಸಿದ ಹ್ಯಾಕಿಂಗ್ ಮತ್ತು ಸಾಮಾಜಿಕ ಮಾಧ್ಯಮದ ದುರ್ಬಳಕೆ ಬಗ್ಗೆ ಅಮೆರಿಕದ ವಿಶೇಷ ನ್ಯಾಯವಾದಿ ರಾಬರ್ಟ್ ಮೆಲ್ಲರ್ ನಡೆಸಿದ ತನಿಖೆಯ ವರದಿ ಹೊರಬಿದ್ದ ನಂತರ ನ್ಯೂಯಾರ್ಕ್ ಟೈಮ್ಸ್ ವಿವಾದಿತ ವರದಿಯನ್ನು ಪ್ರಕಟಿಸಿತ್ತು. 2016ರ ಚುನಾವಣೆಗೂ ಮುನ್ನ ಟ್ರಂಪ್ ಅಭಿಯಾನ ತಂಡ ಮತ್ತು ರಶ್ಯದ ಮಧ್ಯೆ ಇದ್ದ ಸಂಪರ್ಕಗಳ ಬಗ್ಗೆ ಮೆಲ್ಲರ್ ತನ್ನ ವರದಿಯಲ್ಲಿ ತಿಳಿಸಿದ್ದರು.

ಟ್ರಂಪ್ ಉದ್ರಿಕರಾಗಬಹುದು ಅಥವಾ ಆ ಬಗ್ಗೆ ವಿದೇಶಿ ಅಧಿಕಾರಿಗಳ ಜೊತೆ ಚರ್ಚಿಸಬಹುದು ಎಂಬ ಆತಂಕದಿಂದ ರಶ್ಯದ ವಿರುದ್ಧ ಕಾರ್ಯಾಚರಣೆ ನಡೆಸುವ ಬಗ್ಗೆ ಅವರಲ್ಲಿ ಮಾಹಿತಿ ಪಡೆಯಲು ಹಿಂಜರಿಯಲಾಗಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿತ್ತು. ಡಿಜಿಟಲ್ ಅತಿಕ್ರಮಣದ ಬಗ್ಗೆ ಪತ್ರಿಕೆಯ ವರದಿಯಿಂದ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಅಧಿಕಾರಿಗಳು ತಿಳಿಸಿದ್ದರು. ಹಾಗಾಗಿ, ಈ ಅತಿಕ್ರಮಣಗಳಲ್ಲಿ ಕೆಲವನ್ನು ರಶ್ಯದ ಅರಿವಗೆ ಬರಬೇಕು ಎಂಬ ಉದ್ದೇಶದಿಂದಲೇ ಮಾಡಲಾಗಿತ್ತು ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಪತ್ರಿಕೆ ವರದಿ ತಿಳಿಸಿತ್ತು.

 ಟ್ರಂಪ್ ಮತ್ತು ಅವರ ಆಡಳಿತದ ಬಗ್ಗೆ ನ್ಯೂಯಾರ್ಕ್ ಟೈಮ್ಸ್, ವಾಶಿಂಗ್ಟನ್ ಪೋಸ್ಟ್ ಸೇರಿದಂತೆ ಅನೇಕ ಪತ್ರಿಕೆಗಳು ಅಸಂಖ್ಯಾತ ತನಿಖಾ ವರದಿಯನ್ನು ಪ್ರಕಟಿಸಿವೆ ಮತ್ತು ಅನೇಕ ಸಮಿತಿಗಳು ಇವುಗಳ ತನಿಖೆ ನಡೆಸುತ್ತಿವೆ.

ಒಂದು ಕಾಲದಲ್ಲಿ ಅತ್ಯುತ್ತಮ ಪತ್ರಿಕೆಯಾಗಿದ್ದ ನ್ಯೂಯಾರ್ಕ್ ಟೈಮ್ಸ್ ಸದ್ಯ ಒಂದು ವರದಿಗಾಗಿ ಹಪಹಪಿಸುತ್ತಿದೆ, ಅದು ಯಾವುದೇ ವರದಿ ಆಗಿರಲಿ, ನಮ್ಮ ದೇಶಕ್ಕೆ ಕೆಟ್ಟದ್ದೇ ಆಗಿರಲಿ ಆ ಬಗ್ಗೆ ಅದು ಯೋಚಿಸುತ್ತಿಲ್ಲ ಎಂದು ಟ್ರಂಪ್ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News