ಹೆಜಮಾಡಿ ಟೋಲ್ ಸಭೆ: ಯಥಾಸ್ಥಿತಿ ಮುಂದುವರಿಕೆ

Update: 2019-06-16 14:36 GMT

ಪಡುಬಿದ್ರಿ: ಹೆಜಮಾಡಿ ಟೋಲ್‍ನಲ್ಲಿ ಸ್ಥಳೀಯರಿಗೆ ನೀಡುತ್ತಿದ್ದ  ವಿನಾಯಿತಿಯನ್ನು ಕಳೆದ ವಾರ ಹಿಂದಕ್ಕೆ ಪಡೆದಿದ್ದು, ಸ್ಥಳೀಯರ ವಿರೋಧದ ಬಳಿಕ ವಿನಾಯಿತಿಯನ್ನು ಮುಂದುವರಿಸಿದ್ದು, ರವಿವಾರ ನಡೆದ ಸಭೆಯಲ್ಲೂ ವಿನಾಯಿತಿ ಯಥಾಸ್ಥಿತಿ ಮುಂದುವರಿಸಲಿದೆ ಎಂದು ತಿಳಿದುಬಂದಿದೆ.

ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ಸಮ್ಮುಖದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಟೋಲ್ ಅಧಿಕಾರಿಗಳು, ಟೋಲ್ ವಿರೋಧಿ ಸ್ಥಳೀಯರ ನಡುವೆ  ನಡೆದ ಸಭೆಯಲ್ಲಿ ಟೋಲ್ ಅಧಿಕಾರಿಗಳು ಸಮ್ಮತಿಸಿದ್ದಾರೆ.

ನವಯುಗ ಟೋಲ್ ಪ್ಲಾಝಾದಲ್ಲಿ ಯಾವುದೇ ಹೊಸ ಸುಂಕ ವಸೂಲಿ ಉಪಕ್ರಮಗಳಿಗೆ ಇಳಿಯದೇ ಯಥಾಸ್ಥಿತಿಯನ್ನು ಮುಂದುವರಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಯಿತು. ಪಡುಬಿದ್ರಿ, ಹೆಜಮಾಡಿ, ಉಚ್ಚಿಲದಿಂದ ಬಂದಿದ್ದ ಸ್ಥಳೀಯರು ತಮ್ಮ  ಸಮಸ್ಯೆಗಳನ್ನು ಸಭೆಯ ಮುಂದೆ ಬಿಚ್ಚಿಟ್ಟರು. ಆದರೆ ಕಂಪೆನಿಯ ಮೇಲಾಧಿಕಾರಿಗಳು ಸಭೆಗೆ ಆಗಮಿಸದಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದರು.

ಪಡುಬಿದ್ರಿ ವ್ಯಾಪ್ತಿಯಲ್ಲಿನ ಹೆದ್ದಾರಿಯ ಅಪೂರ್ಣವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಟೋಲ್ ಸಂಗ್ರಹಿಸಬಾರದು ಎಂದು ಠಾಣಾಧಿಕಾರಿ ನವಯುಗ ಪ್ರಬಂಧಕರಿಗೆ ಸ್ಪಷ್ಟವಾಗಿ ತಿಳಿಸಿದರು. ಆರು ತಿಂಗಳ ಹಿಂದೆ ಸ್ಥಳೀಯರ ಹೋರಾಟದ ಬಳಿಕ ಪಡುಬಿದ್ರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯವರೆಗೆ ಟೋಲ್‍ನಲ್ಲಿ ವಿನಾಯಿತಿ ನೀಡಲಾಗಿತ್ತು. ಆದರೆ ಗುರುವಾರ ಬೆಳಗ್ಗೆಯಿಂದ ಮತ್ತೆ ಟೋಲ್ ವಸೂಲಿಯನ್ನು ಆರಂಭಿಸಿತು. ವಿಷಯ ತಿಳಿದ ವಿವಿಧ ಸಂಘಟನೆಗಳು ಹಾಗೂ ಸ್ಥಳೀಯರು ಟೋಲ್ ವಸೂಲಿಗೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಠಾಣೆಯಲ್ಲಿ ಈ ಕುರಿತು ಸಭೆ ನಡೆಯಲಿದ್ದು, ಅದುವರೆಗೂ ಯಥಾಸ್ಥಿತಿ ಮುಂದುವರಿಸಲಾಗಿತ್ತು. 

ಈ ಬಗ್ಗೆ  ನವಯುಗ ಟೋಲ್ ಪ್ಲಾಝಾ ಪ್ರಬಂಧಕ ಶಿವಪ್ರಸಾದ್ ರೈ ಕಂಪೆನಿಯ ಗಮನಕ್ಕೆ ತರುವುದಾಗಿ ತಿಳಿಸಿದರು. ಪ್ರಮುಖರಾದ ದಮಯಂತಿ ಅಮೀನ್, ಶರ್ಮಿಳಾ ಡಿ ಸಾಲ್ಯನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನಚಂದ್ರ ಜೆ ಶೆಟ್ಟಿ, ಅನ್ಸಾರ್ ಅಹ್ಮದ್, ಶಬ್ಬೀರ್ ಹುಸೈನ್, ರವೀಂದ್ರನಾಥ ಜಿ ಹೆಗ್ಡೆ, ಶೇಖರ ಹೆಜಮಾಡಿ, ಲೋಕೇಶ್ ಕಂಚಿನಡ್ಕ ಮತ್ತಿತರರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News