ನಿವೃತ್ತ ಪೊಲೀಸ್ ಅಧಿಕಾರಿಗಳ ಬೇಡಿಕೆ ಈಡೇರಿಕೆಗೆ ಪ್ರಯತ್ನ: ಎಸ್ಪಿ ನಿಶಾ ಜೇಮ್ಸ್ ಭರವಸೆ

Update: 2019-06-16 15:20 GMT

ಉಡುಪಿ, ಜೂ.16: ಜಿಲ್ಲೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಗಳ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಅನುದಾನದ ಕೊರತೆಯಿದೆ. ಎಷ್ಟು ಸೌಲಭ್ಯಗಳನ್ನು ನೀಡಲು ಸಾಧ್ಯವೋ ಅಷ್ಟನ್ನು ಪ್ರಾಮಾಣಿಕವಾಗಿ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಭರವಸೆ ನೀಡಿದ್ದಾರೆ.

ನಗರದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ರವಿವಾರ ಹಮ್ಮಿ ಕೊಳ್ಳಲಾದ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಕುಟುಂಬದವರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ಪೊಲೀಸ್ ಸಿಬಂದ್ದಿಗಳು ಸ್ಥಳೀಯರು ಹಾಗೂ ಇಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ನಿವೃತ್ತಿಯ ಬಳಿಕವೂ ಅವರಿಂದ ಸಹಕಾರ ಲಭಿಸುತ್ತದೆ ಎಂಜು ನಿಶಾ ಜೇಮ್ಸ್ ನುಡಿದರು.

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಮಾತನಾಡಿ, ಕೆಲಸದ ಒತ್ತಡದಿಂದಾಗಿ ಪೊಲೀಸರು ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ನಿವೃತ್ತಿ ಬಳಿಕ ಅವರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಪೊಲೀಸರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಸರಕಾರ ಅನೇಕ ಆರೋಗ್ಯ ಸೇವೆಗಳನ್ನು ಒಗ್ಗೂಡಿಸಿ ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದೆ. ನಿವೃತ್ತ ಪೊಲೀಸ್ ಸಿಬ್ಬಂದಿಗೂ ಇದನ್ನು ವಿಸ್ತರಿಸಬೇಕು. ಪೊಲೀಸ್ ಭಾಗ್ಯ ಯೋಜನೆಯಲ್ಲಿ ನಿವೃತ್ತಿ ಬಳಿಕ 2 ಲಕ್ಷ ರೂ.ವರೆಗೆ ವಿಮೆ ಲಭ್ಯವಾಗುತ್ತದೆ. ಈ ಮೊತ್ತವನ್ನು ಹೆಚ್ಚಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸುಮಾರು 60ಕ್ಕೂ ಹೆಚ್ಚಿನ ನಿವೃತ್ತ ಪೊಲೀಸ್ ಸಿಬಂದಿಗಳು ಹಾಗೂ ಅವರ ಕುಟುಂಬದವರು ಕಣ್ಣಿ ತಪಾಸಣೆ ಮಾಡಿಸಿ ಕೊಂಡರು. ಎಸ್ಪಿ ನಿಶಾ ಜೇಮ್ಸ್ ಹಾಗೂ ಆಸ್ಪತ್ರೆಯ ನಿರ್ದೇಶಕ ಕೃಷ್ಣ ಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು.

ನಿವೃತ್ತ ಪೊಲೀಸ್ ಅಧಿಕಾರಿ ಸುಧಾಕರ್ ಹೆಗ್ಡೆ ಉಪಸ್ಥಿತರಿದ್ದರು. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಪ್ರಭುದೇವ ಮಾನೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News