ಉಡುಪಿ: ಅವಕಾಶ ವಂಚಿತ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ

Update: 2019-06-16 15:25 GMT

ಉಡುಪಿ, ಜೂ.16: ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಮಾಜದಲ್ಲಿರುವ ಅಶಕ್ತರನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ಕೆ. ರಘುಪತಿಭಟ್ ಹೇಳಿದ್ದಾರೆ.

ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಕಡಿಯಾಳಿ ಆಸರೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ರವಿವಾರ ಕಡಿಯಾಳಿ ದೇವಸ್ಥಾನದ ಕಾತ್ಯಾಯಿನಿ ಮಂಟಪದಲ್ಲಿ ಆಯೋಜಿಸಿದ್ದ ಪೋಷಕರನ್ನು ಕಳಕೊಂಡ ಅವಕಾಶ ವಂಚಿತ ಮಕ್ಕಳಿಗೆ ಶೈಕ್ಷಣಿಕ ವೆಚ್ಚಕ್ಕಾಗಿ ಧನಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಕ್ಕಳಿಗೆ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಎಲ್ಲಿಯವರೆಗೆ ಶಿಕ್ಷಣ ಪಡೆಯಲು ಇಚ್ಛಿಸುತ್ತಾರೊ ಅಲ್ಲಿಯವರೆಗೆ ಅವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಆಸರೆ ಟ್ರಸ್ಟ್ ವಹಿಸಿಕೊಳ್ಳಲಿದೆ. ಕಳೆದ ಬಾರಿ ಗಣೇಶೋತ್ಸವ ಸಮಿತಿ ಬಾಲಕಿಯರು ಕೃಷ್ಣಾಷ್ಟಮಿ ಸಂದರ್ಭ ಹುಲಿ ವೇಷವನ್ನು ಹಾಕಿ ಸುಮಾರು 5 ಲಕ್ಷ ರೂ.ಗಳನ್ನು ಸಂಗ್ರಹಿಸಿ ಆಸರೆ ಟ್ರಸ್ಟ್‌ನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಠೇವಣಿಯಾಗಿ ಇರಿಸಿದ್ದಾರೆ ಎಂದವರು ಹೇಳಿದರು.

ಈ ಬಾರಿ ನಗರಸಭೆಯಿಂದ ಒಂದು ಟ್ಯಾಂಕರ್ ನೀರು ವಿತರಣೆಯಾಗಿಲ್ಲ. 35 ವಾರ್ಡ್‌ಗಳ ಸದಸ್ಯರು ಅವರ ದಾನಿಗಳ ನೆರವು, ಸ್ವಂತ ಖರ್ಚಿನಿಂದ ಹಾಗೂ ಪರಿಶ್ರಮದಿಂದ ನೀರು ವಿತರಿಸಿದ್ದಾರೆ. ಮಳೆಗಾಲಕ್ಕೆ ಸಂಬಂಧಿಸಿದಂತೆ ಯಾವುದೇ ಚರಂಡಿಗಳ ಹೂಳೆತ್ತುವ ಕೆಲಸವಾಗಿಲ್ಲ. ಜನಪ್ರತಿನಿಧಿಗಳು ಆಯ್ಕೆಯಾಗಿ 10 ತಿಂಗಳು ಕಳೆದಿವೆ. ಆದರೆ ಇನ್ನೂ ಅಧಿಕಾರ ಸ್ವೀಕರವಾಗಿಲ್ಲ. ಇದರಿಂದಾಗಿ ಅಧಿಕಾರಿಗಳ ಜತೆ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ ಎಂದರು.

ಬೇಸಗೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ ನಗರಸಭೆ ಸದಸ್ಯರಾದ ಗೀತಾಶೇಟ್, ಗಿರೀಶ್ ಅಂಚನ್, ಗಣೇಶ್ ಆಚಾರ್ಯ, ಪ್ರಶಾಂತ್ ಕುಲಾಲ್, ವಿನಾಯಕ್ ಶೇಟ್ ಇವರನ್ನು ಸನ್ಮಾನಿಸಲಾಯಿತು.

ಕಡಿಯಾಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ.ವಸಂತ ಭಟ್, ರಾಮಚಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಉಪಸ್ಥಿತರಿದ್ದರು. ಸಂಘದ ಮಟ್ಟಾರು ಗಣೇಶ್ ಕಿಣಿ ಸ್ವಾಗತಿಸಿ, ಸತೀಶ್ ಕುಲಾಲ್ ವಂದಿಸಿದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News