ವಿವಾಹವಾಗಲು ಒಪ್ಪದ ಅಪ್ರಾಪ್ತ ಪುತ್ರಿಗೆ ಇರಿದು ಕಾಲುವೆಗೆ ತಳ್ಳಿದ ತಂದೆ

Update: 2019-06-16 15:48 GMT

 ಶಹಜಹಾನ್‌ಪುರ, ಜೂ. 16: ವಿವಾಹವಾಗಲು ಒಪ್ಪದೆ ಶಿಕ್ಷಣ ಮುಂದುವರಿಸಲು ಬಯಸಿದ 15 ವರ್ಷದ ಬಾಲಕಿಯೊಬ್ಬಳಿಗೆ ಆಕೆಯ ತಂದೆ ಹಾಗೂ ಸಹೋದರ ಚಾಕುವಿನಿಂದ ಇರಿದು ಕಾಲುವೆಗೆ ಎಸೆದ ಅಮಾನವೀಯ ಘಟನೆ ಶಹಜಹಾನ್‌ಪುರದಲ್ಲಿ ಬೆಳಕಿಗೆ ಬಂದಿದೆ.

 ‘‘ಕಾಲುವೆಯ ಸಮೀಪದ ನಿರ್ಜನ ಪ್ರದೇಶಕ್ಕೆ ತಂದೆ ನನ್ನನ್ನು ಕರೆದೊಯ್ದರು. ಅಲ್ಲಿಗೆ ನನ್ನ ಸಹೋದರ ಬಂದು ಸೇರಿದ. ಸಹೋದರ ಹಿಂದಿನಿಂದ ನನ್ನ ಕುತ್ತಿಗೆಗೆ ಬಟ್ಟೆಯೊಂದನ್ನು ಹಾಕಿ ಹಿಡಿದುಕೊಂಡ. ತಂದೆ ನನಗೆ ಚೂರಿಯಿಂದ ಹಲವು ಬಾರಿ ಇರಿದರು. ಇರಿಯದಂತೆ ನಾನು ಬೇಡಿಕೊಂಡೆ. ಆದರೆ, ಅವರಿಗೆ ಕನಿಕರ ಉಂಟಾಗಲಿಲ್ಲ. ಅನಂತರ ಅವರು ನನ್ನನ್ನು ಕಾಲುವೆಗೆ ತಳ್ಳಿದರು. ನಾನು ವಿದ್ಯಾಭ್ಯಾಸ ಕೊನೆಗೊಳಿಸಿ ವಿವಾಹವಾಗಬೇಕು ಎಂದು ಅವರು ಬಯಸಿದ್ದರು’’ ಎಂದು ಬಾಲಕಿ ಹೇಳಿದ್ದಾಳೆ.

ಕೊನೆಗೂ ಬಾಲಕಿ ಕಾಲುವೆಯ ನೀರಿನಲ್ಲಿ ಈಜಿ ಪಾರಾಗಿದ್ದಾಳೆ. ಬಾಲಕಿಯ ಪ್ರತಿಪಾದನೆಯನ್ನು ಆಕೆಯ ಬಾವ ದೃಢಪಡಿಸಿದ್ದಾರೆ. ಹೆತ್ತವರು ವಿವಾಹಕ್ಕೆ ಒತ್ತಾಯಿಸುತ್ತಿರುವುದರಿಂದ ಆಕೆಯನ್ನು ನಮ್ಮೊಂದಿಗೆ ಇರಿಸಿಕೊಂಡಿದ್ದೇವೆ ಎಂದು ಬಾಲಕಿಯ ಬಾವ ಹೇಳಿದ್ದಾರೆ.

ತಂದೆ ಹಾಗೂ ಸಹೋದರನ ವಿರುದ್ಧ ಬಾಲಕಿ ಮಾಡಿದ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಎಸ್‌ಪಿ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News