ದೈವಾರಾಧನೆಯನ್ನು ಪ್ರದರ್ಶನಕ್ಕಿಡುವುದು ಸರಿಯಲ್ಲ: ಏರ್ಯ

Update: 2019-06-16 16:27 GMT

ಉಡುಪಿ, ಜೂ.16: ತುಳುನಾಡಿನ ದೈವಾರಾಧನೆ ಆರಾಧನಾ ಕಲೆ. ಅದನ್ನು ವೇದಿಕೆಗೆ ತಂದು ಪ್ರದರ್ಶನಕ್ಕಿಡುವುದು ಅನ್ಯಥಾ ಸರಿಯಲ್ಲ ಎಂದು ಹಿರಿಯ ಜನಪದ ವಿದ್ವಾಂಸ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಸದಸ್ಯ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದ್ದಾರೆ.

ನಾಡಿನ ಹಿರಿಯ ಜಾನಪದ ವಿದ್ವಾಂಸ ದಿ. ಎಚ್.ಎಲ್.ನಾಗೇಗೌಡರಿಂದ ಸ್ಥಾಪನೆಗೊಂಡ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭದ ಮತ್ತು ಜಿಲ್ಲೆಯ ಜಾನಪದ ವೈಭವದ ಪ್ರದರ್ಶನವನ್ನು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತುಳುನಾಡಿನ ಹತ್ತಾರು ಜನಾಂಗಗಳನ್ನು ಒಂದುಗೂಡಿಸುವುದು ಇಲ್ಲಿನ ದೈವಗಳು ಮತ್ತು ದೈವಾರಾಧನೆ. ಇದರಲ್ಲಿ ಎಲ್ಲಾ ಕುಲಗಳು ಒಂದಾಗುತ್ತವೆ. ಅಲ್ಲಿ ವೇದಗಳು ಬರುವುದಿಲ್ಲ, ಗಾದೆಗಳು ಬರುತ್ತಾವೆ. ನುಡಿಮುತ್ತು ಬರುವುದಿಲ್ಲ ನುಡಿಗಳು ಬರುತ್ತಾವೆ ಎಂದರು.

ಜಿಲ್ಲೆಯ ಜಾನಪದ ಅತ್ಯಂತ ವಿಶಾಲವಾದುದು. ಇದಕ್ಕೆ ಇತಿಮಿತಿ ಇಲ್ಲ. ಜ್ಞಾನಭಂಡಾರ ಎಂಬುದು ಜನಪದದ ತುಡಿತ, ಮಿಡಿತ, ದುಡಿತಗಳಲ್ಲಿವೆ. ಇದರಲ್ಲಿ ಪ್ರಾಚೀನ ಜನರ ಕೊಡುಗೆ ಅನನ್ಯ. ಜನಪದ ಅರಿವಿಗೆ ಕೊಟ್ಟ, ತಿಳುವಳಿಕೆಗೆ ಕೊಟ್ಟ ಕೊಡುಗೆ ಅಪಾರ ಎಂದು ಏರ್ಯ ನುಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಜಾನಪದ ಸಂಶೋಧಕರಾದ ಡಾ.ಗಣನಾಥ ಎಕ್ಕಾರು ಅವರು ತುಳುನಾಡಿನ ಜಾನಪದದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕರ್ನಾಟಕ ರಾಜ್ಯ ಹಣಕಾಸು ಆಯೋಗ ಅನುಷ್ಠಾನ ಕಾರ್ಯಪಡೆಯ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ, ಹಿರಿಯರಾದ ಶಂಭು ಶೆಟ್ಟಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ಎಸ್.ಎ.ಕೃಷ್ಣಯ್ಯ ಹಾಗೂ ರಮೇಶ್ ಕಲ್ಮಾಡಿ ಅವರನ್ನು ಸನ್ಮಾನಿಸಲಾಯಿತು.

ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ತಲ್ಲೂರು ಶಿವರಾಮ ಶೆಟ್ಟಿ, ತಾಲೂಕು ಘಟಕಗಳ ಅಧ್ಯಕ್ಷರಾಗಿ ಸಂಜೀವ ಟಿ.ಕರ್ಕೇರ (ಉಡುಪಿ), ಜಿ.ಶ್ರೀಧರ ಶೇಣವ (ಕಾಪು), ಎನ್.ಎಂ.ಹೆಗ್ಡೆ (ಕಾರ್ಕಳ), ಟಿ.ಜಿ.ಆಚಾರ್ (ಹೆಬ್ರಿ), ವಿಶ್ವನಾಥ ಶೆಟ್ಟಿ (ಬೈಂದೂರು), ರತ್ನಾಕರ ಶೆಟ್ಟಿ (ಕುಂದಾಪುರ) ಹಾಗೂ ನೇರಿ ಕರ್ನೇಲಿಯೊ (ಬ್ರಹ್ಮಾವರ) ಪದಗ್ರಹಣ ಮಾಡಿದರು.

ಸುನಿಲ್ ಕುಮಾರ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಎನ್.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಯ ಜಾನಪದ ಕಲೆಗಳಾದ ಸಾಂಪ್ರದಾಯಿಕ ಡೋಲು ವಾದನ, ಕಂಗೀಲು ಕುಣಿತ, ಕರಗ ಕೋಲಾಟ, ವೀರಗಾಸೆ, ಹುಲಿವೇಷ, ಹಾಲಕ್ಕಿ ಸುಗ್ಗಿ ಕುಣಿತ, ವೀರಗಾಸೆ, ಗುಮಟೆ ಕುಣಿತ, ಯಕ್ಷಗಾನಗಳ ಪ್ರದರ್ಶನವೂ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News