ಗಂಡನಿಂದ ವರದಕ್ಷಿಣೆಗೆ ಕಿರುಕುಳ ಆರೋಪ: ನೇಣುಬಿಗಿದು ಯುವತಿ ಆತ್ಮಹತ್ಯೆ

Update: 2019-06-16 16:35 GMT

ಕುಂದಾಪುರ, ಜೂ.16: ವರದಕ್ಷಿಣೆಗಾಗಿ ಗಂಡ ನೀಡುತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೇ ಯುವತಿಯೊಬ್ಬಳು ತಾನು ವಾಸವಾಗಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತಳ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಗುಜ್ಜಾಡಿ ಗ್ರಾಮದ ಲಕ್ಷ್ಮೀ ಪೂಜಾರ್ತಿಯವರ ಮಗಳಾದ ಶ್ವೇತಾಳನ್ನು 2014ರ ಮೇ ತಿಂಗಳಲ್ಲಿ ಹರೀಶ ಪೂಜಾರಿ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದು, ಮದುವೆಯಾದ ದಿನದಿಂದಲೂ ಹರೀಶ್ ಹೆಂಡತಿಗೆ ವಿನಾಕಾರಣ ಹೊಡೆಯುವುದು ಬೈಯುವುದು ಮಾಡಿ ಹಿಂಸೆ ನೀಡುತಿದ್ದು, ಮನೆ ಖರ್ಚಿಗೆ ಕೂಡಾ ಶ್ವೇತಾಳ ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸುತಿದ್ದ ಎನ್ನಲಾಗಿದ್ದು, ಶ್ವೇತಾ ತಾಯಿಗೆ ಹೇಳಿ ಹಣ ಹೊಂದಿಸಿ ಕೊಡುತಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಹರೀಶ್ ವಿಪರೀತ ಕುಡಿದುಕೊಂಡು ಬಂದು ಹಿಂಸೆ ನೀಡುತಿದ್ದು, ಜೂ.15ರಂದು ಅಪರಾಹ್ನ ಮೂರು ಗಂಟೆಗೆ ಶ್ವೇತಾ, ಗೀತಾ ಪೂಜಾರ್ತಿಗೆ ದೂರವಾಣಿ ಕರೆ ಮಾಡಿ ಗಂಡನ ವಿರುದ್ಧ ದೂರಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ. ಆದರೆ ಅದೇ ದಿನ ಸಂಜೆ 7ಗಂಟೆಗೆ ಶ್ವೇತಾ ನೇಣು ಬಿಗಿದುಕೊಂಡು ಅಸ್ವಸ್ಥಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮಾಹಿತಿ ಬಂದಿದೆ. ಅದರಂತೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಶ್ವೇತಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಗಂಡನ ಮಾನಸಿಕ ಹಾಗೂ ದೈಹಿಕ ಹಿಂಸೆಯೇ ಶ್ವೇತಾಳ ಸಾವಿಗೆ ಕಾರಣ ಎಂದು ಗೀತಾ ಕುಂದಾಪುರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News