ಅಸ್ಗರ್ ಅಲಿ, ಸಹಚರರಿಗೆ ನ್ಯಾಯಾಂಗ ಬಂಧನ

Update: 2019-06-16 16:40 GMT

ಮಂಗಳೂರು, ಜೂ. 16: ಕುಖ್ಯಾತ ರೌಡಿ, ಭೂಗತ ಪಾತಕಿ ಅಸ್ಗರ್ ಅಲಿ ಮತ್ತು ಆತನ ಇಬ್ಬರು ಸಹಚರರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಳ್ಳಾಲ ನಿವಾಸಿಗಳಾದ ಅಸ್ಗರ್ ಅಲಿ (42), ಆತನ ಸಹಚರರಾದ ನವಾಝ್ (50) ಮತ್ತು ರಶೀದ್ (45) ಅವರನ್ನು ಶನಿವಾರ ಮಂಗಳೂರಿನ ಕಂಕನಾಡಿ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್ ಮತ್ತು ಸಿಸಿಆರ್‌ಬಿ ಇನ್‌ಸ್ಪೆಕ್ಟರ್ ಶ್ಯಾಮ ಸುಂದರ್ ಅವರನ್ನೊಳ ಗೊಂಡ ವಿಶೇಷ ಪೊಲೀಸ್ ತಂಡ ಬಂಧಿಸಿತ್ತು. ರವಿವಾರ ಸಂಜೆ ಅವರನ್ನು ಪಾಂಡೇಶ್ವರ ಪೊಲೀಸರು ನ್ಯಾಯಾಧೀಶರ ಸಮಕ್ಷಮ ಹಾಜರು ಪಡಿಸಿದರು.

2005ರಲ್ಲಿ ಪೊಳಲಿ ಅನಂತು ಕೊಲೆ ಪ್ರಕರಣ ಮತ್ತು ಇತರ ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಸ್ಗರ್ ಅಲಿ 2007ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ದುಬೈಗೆ ಪರಾರಿಯಾಗಿದ್ದ. ಆ ಬಳಿಕ ಅಲ್ಲಿ ಭೂಗತನಾಗಿದ್ದುಕೊಂಡೇ ಟಾರ್ಗೆಟ್ ಇಲ್ಯಾಸ್ ಕೊಲೆ ಮತ್ತು ಇತರ ಕೆಲವು ಅಪರಾಧ ಕೃತ್ಯಗಳನ್ನು ಮಾಡಿಸಿದ್ದನು ಎಂದು ಪೊಲೀಸರು ತಿಳಿಸಿದ್ದು, ಮಾತ್ರವಲ್ಲದೆ ಉಳ್ಳಾಲದ ಯುವತಿ ಸಕಿನಾ ಕೊಲೆಯನ್ನೂ ಮಾಡಿಸಿದ್ದನು ಎಂಬ ಆರೋಪವಿದೆ.

ಸುಮಾರು 12 ವರ್ಷಗಳಿಂದ ಭೂಗತನಾಗಿದ್ದ ಆತ 2019 ಮಾರ್ಚ್ 2ನೇ ವಾರದಲ್ಲಿ ಮುಂಬೈಗೆ ಬಂದಿದ್ದು, ಬಳಿಕ ಕಳೆದ ಎರಡು ತಿಂಗಳ ಹಿಂದೆ ಕೇರಳದ ಕಾಸರಗೋಡಿನ ಉಪ್ಪಳಕ್ಕೆ ಬಂದು ಅಲ್ಲಿ ಅವಿತುಕೊಂಡಿದ್ದನು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಪೊಲೀಸರು ಉಪ್ಪಳಕ್ಕೆ ತೆರಳಿ ಶನಿವಾರ ಆತನನ್ನು ಬಂಧಿಸಿದರು. ಬಳಿಕ ಆತನಿಗೆ ನಕಲಿ ಪಾಸ್‌ಪೋರ್ಟ್ ಮಾಡಿಸಲು ಸಹಕರಿಸಿದ ನವಾಝ್ ಮತ್ತು ರಶೀದ್‌ನನ್ನು ಬಂಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News