ಧರ್ಮಗಳು ಮಣ್ಣಿನ ಸೊಬಗು: ಡಾ. ರಾಜೇಂದ್ರಕುಮಾರ್

Update: 2019-06-16 16:44 GMT

ಮಂಗಳೂರು, ಜೂ.16: ಎಲ್ಲ ಧರ್ಮಗಳು, ಪಂಥಗಳು ಸಮನ್ವಯ ಸಾಧಿಸುವುದಿದ್ದರೆ ಅದು ಭಾರತದಲ್ಲಿ ಮಾತ್ರ ಸಾಧ್ಯ. ಧರ್ಮಗಳು ಈ ಮಣ್ಣಿನ ಸೊಬಗು ಎಂದು ವಾಮಂಜೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಕುಮಾರ್ ಪಿ.ಸಿ. ಅಭಿಪ್ರಾಯಪಟ್ಟಿದ್ದಾರೆ.

ನಗರದ ಮೊರ್ಗನ್ಸ್‌ಗೇಟ್ ಕಾಸಿಯಾ ಚರ್ಚ್ ಸಭಾಂಗಣದಲ್ಲಿ ಸದ್ಭಾವನಾ ವೇದಿಕೆ ಜಪ್ಪು ವರ್ತುಲ ವತಿಯಿಂದ ರವಿವಾರ ಹಮ್ಮಿಕೊಳ್ಳಲಾದ ಈದ್ ಸೌಹಾರ್ದ ಕೂಟದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಉದ್ಯಾನವನದಲ್ಲಿ ಎಲ್ಲ ಬಗೆಯ ಹೂಗಿಡಗಳು ಇರುತ್ತವೆ. ಅದರಂತೆ ದೇಶದಲ್ಲಿ ಎಲ್ಲ ಧರ್ಮಗಳ ಜನಾಂಗವಿದ್ದಾಗ ಮಾತ್ರ ಭಾರತ ಸ್ವಚ್ಛಂದವಾಗಿ ಇರಲು ಸಾಧ್ಯವಾಗುತ್ತದೆ. ಎಲ್ಲ ಧರ್ಮಗಳ ಅನುಯಾಯಿಗಳು ಒಳ್ಳೆಯ ಮಾರ್ಗದಲ್ಲಿ ಜೀವನ ನಡೆಸಬೇಕು. ಪ್ರಕೃತಿ ಕೂಡ ಎಲ್ಲ ಧರ್ಮಗಳು ಒಂದೇ ಎಂಬುದಾಗಿ ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದರು.

ಎಲ್ಲ ಧರ್ಮಗಳ ಹಬ್ಬ, ಉತ್ಸವಗಳನ್ನು ನಾವು ಆಚರಿಸುತ್ತೇವೆ; ಪಾಲ್ಗೊಳ್ಳುತ್ತೇವೆ. ಆದರೆ ಆ ಹಬ್ಬಗಳ ಹಿಂದಿನ ಆಧ್ಯಾತ್ಮಿಕ ಉದ್ದೇಶಗಳನ್ನು ಅರಿತುಕೊಳ್ಳಬೇಕು. ಪರಿಣಾಮ ಮನಸುಗಳು ಬದಲಾವಣೆ ಹೊಂದುತ್ತವೆ. ಎಲ್ಲರೂ ಒಂದೇ ಎನ್ನುವ ಏಕಸಂದೇಶ ರವಾನೆಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಪ್ಪು ಸಂತ ಜೋಸೆಫ್ ಚರ್ಚ್‌ನ ಧರ್ಮಗುರು ಫಾ.ಕ್ಲಿಫರ್ಡ್ ಫೆರ್ನಾಂಡಿಸ್, ಮಂಗಳೂರು ಇಸ್ಲಾಂ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ, ವಾಗ್ಮಿ ಇಸಾಕ್ ಅಬ್ದುಲ್ಲಾ ಪುತ್ತೂರು ಮಾತನಾಡಿದರು. ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಅಧ್ಯಕ್ಷ ಕೇಶವ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಉಪಾಧ್ಯಕ್ಷ ಜೇಸನ್ ಪೀಟರ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಸಾಲೆಹ್ ಮುಹಮ್ಮದ್, ಕಾರ್ಯದರ್ಶಿ ಎಂ.ಐ.ಖಲೀಲ್, ಖಜಾಂಚಿ ರಂಜನ್ ಕೆ.ಎಸ್., ಹನೀಫ್ ಮಾಸ್ಟರ್, ರಾಮದಾಸ್ ಶೆಟ್ಟಿ, ಸುಧಾಮಣಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸದಿದ್ ಮುಹಮ್ಮದ್ ದುಆ ಪಠಿಸಿದರು. ಹುಸೈನ್ ಕಾಟಿಪಳ್ಳ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News