ಮುಲ್ಲರಪಟ್ಣ ಸೇತುವೆ ಕುಸಿದು ವರ್ಷವಾದರೂ ಆರಂಭವಾಗದ ಕಾಮಗಾರಿ: ತಾತ್ಕಾಲಿಕ ಮಣ್ಣಿನ ಕಚ್ಚಾ ರಸ್ತೆ ತೆರವು

Update: 2019-06-17 11:51 GMT

ಬಂಟ್ವಾಳ, ಜೂ.17: ಬಂಟ್ವಾಳ-ಮಂಗಳೂರು ತಾಲೂಕುಗಳನ್ನು ಒಳರಸ್ತೆಯಾಗಿ ಸಂಪರ್ಕಿಸುವ 30 ವರ್ಷ ಹಳೆಯ ಮುಲ್ಲರಪಟ್ಣ ಸೇತುವೆಯು ಕಳೆದ ವರ್ಷ ಜೂ.26ರಂದು ಮುರಿದು ಬಿದ್ದು ಒಂದು ವರ್ಷವಾಗುತ್ತಾ ಬಂದರೂ ಇಲ್ಲಿ ಹೊಸ ಸೇತುವೆಯ ಕನಸು ಕನಸಾಗಿದೆ ಉಳಿದಿದೆ. ಶ್ರಮದಾನ ಮೂಲಕ ಸ್ಥಳೀಯರು ನಿರ್ಮಾಣ ಮಾಡಿದ ಮಣ್ಣಿನ ಕಚ್ಛಾ ರಸ್ತೆಯನ್ನು ಶುಕ್ರವಾರ ತೆರವುಗೊಳಿಸಿದ್ದು, ಮಳೆಗಾಲದಲ್ಲಿ ಗ್ರಾಮಸ್ಥರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಮುಲ್ಲರಪಟ್ಣದ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯು ಕಳೆದ ವರ್ಷ ಕುಸಿದಿತ್ತು. ನಿರಂತರ ಮಳೆ ನೀರಿನ ಹರಿವು ಹಾಗೂ ಇಕ್ಕೆಲಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯಿಂದ ಸೇತುವೆಯ ಪಿಲ್ಲರ್‌ಗಳು ಶಿಥಿಲಗೊಂಡು ಕುಸಿತಕ್ಕೆ ಕಾರಣವಾಗಿದೆ ಎಂದು ದೂರಲಾಗಿತ್ತು. ಈ ಸೇತುವೆ ಮುರಿದು ಬಿದ್ದ ಬಳಿಕ ವಾಹನ ಸಂಚಾರವೂ ಸೇತುವೆ ಎರಡೂ ಬದಿಯಿಂದಲೇ ವಾಪಸಾಗುತ್ತಿದ್ದು, ಪಾದಚಾರಿಗಳಿಗೆ ಮಾತ್ರ ಇಲ್ಲಿಗೆ ಸಮೀಪದ ತೂಗುಸೇತುವೆ ಸಹಕಾರಿಯಾಗಿತ್ತು.

ಇದರಿಂದಾಗಿ ಕಳೆದ ಡಿಸೆಂಬರ್ ತಿಂಗಳು ಸ್ಥಳೀಯ ಗ್ರಾಪಂ ಸದಸ್ಯರೊಬ್ಬರ ನೇತೃತ್ವದಲ್ಲಿ ಜಿಎಚ್‌ಎಂ ಫೌಂಡೇಶನ್ ವತಿಯಿಂದ ನದಿಯಲ್ಲಿ ಒಂದು ವಾರ ಮಣ್ಣು ಮತ್ತು ಮರಳು ತುಂಬಿಸುವ ಮೂಲಕ ತಾತ್ಕಾಲಿಕ ಕಚ್ಚಾ ರಸ್ತೆ ನಿರ್ಮಿಸಿ ಜನಪ್ರತಿನಿಧಿಗಳನ್ನು ಅಣಕಿಸುವಂತೆ ಮಾಡಿದ್ದರು. ಇದರಿಂದಾಗಿ ಲಘುವಾಹನ ಸೇರಿದಂತೆ ಇಲ್ಲಿನ ಮುತ್ತೂರು ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸಹಿತ ನೂರಾರು ಮಂದಿ ಪ್ರತಿದಿನ ನದಿ ದಾಟಲು ಅನುಕೂಲಕರವಾಗಿತ್ತು. ಇದೀಗ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಕೂಡಾ ನೆರೆ ನೀರು ಬರಲು ಆರಂಭಗೊಂಡಿದ್ದು, ಕಳೆದ 6 ತಿಂಗಳಿನಿಂದ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ವರದಾನವಾಗಿದ್ದ ತಾತ್ಕಾಲಿಕ ಕಚ್ಛಾ ರಸ್ತೆಯನ್ನು ಶುಕ್ರವಾರ ತೆರವುಗೊಳಿಸಿದ್ದು, ಇದೀಗ ಕಚ್ಛಾ ರಸ್ತೆ ಸಂಪರ್ಕ ಕಳಚಿಕೊಂಡಂತಾಗಿದೆ.

ಕುಸಿದು ಬಿದ್ದಿರುವ ಸೇತುವೆಯನ್ನು ಉಳಿದ ಪಿಲ್ಲರ್‌ಗಳಿಗೆ ಜೋಡಿಸುವ ಕಾರ್ಯಕ್ಕೆ ಚಿಂತನೆ ಮಾಡಲಾಗಿತ್ತು. ಆದರೆ, ಸೇತುವೆಯ ಇನ್ನುಳಿದ ಪಿಲ್ಲರ್‌ಗಳು ಕೂಡ ಶಿಥಿಲಗೊಂಡಿದ್ದು, ಬೇರೆ ಹೊಸ ಸೇತುವೆಯನ್ನು ನಿರ್ಮಿಸುವಂತೆ ಸರಕಾರಕ್ಕೆ ಒತ್ತಾಯಿಸಿದ್ದೆ. ಇದೀಗ ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಸರಕಾರದಿಂದ 14. 65 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಟೆಂಡರ್ ಹಾಗೂ ತಾಂತ್ರಿಕ ಪ್ರಕ್ರಿಯೆಲ್ಲಿದೆ. ಮಳೆಗಾಲದ ಬಳಿಕ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. 

ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಾಸಕ, ಬಂಟ್ವಾಳ

ಶಾಲೆ, ಸಾವು-ನೋವು, ಮದುವೆ ಇನ್ನಿತರ ಸಮಾರಂಭಗಳಿಗೆ ಸಂಚರಿಸಲು ಬಹಳಷ್ಟು ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಅನುಮತಿ ಇಲ್ಲದಿದ್ದರೂ ಇಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದೆವು. ಇದೀಗ ನದಿಯಲ್ಲಿ ಮಳೆ ನೀರು ಕಚ್ಛಾ ರಸ್ತೆಯಲ್ಲಿ ಹರಿಯಲಾರಂಭಿಸಿದೆ. ಈ ನಿಟ್ಟಿನಲ್ಲಿ ಯಾವುದೇ ಅನಾಹುತ ಸಂಭವಿಸದಿರಲಿ ಎಂದು ಮುಂಜಾಗೃತ ಕ್ರಮವಾಗಿ ತಾತ್ಕಾಲಿಕ ರಸ್ತೆಯನ್ನು ತೆರವುಗೊಳಿಸಲಾಗಿದೆ. ನೂತನ ಸೇತುವೆ ನಿರ್ಮಾಣದ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. 

ಸುಲೈಮಾನ್, ಸಾಮಾಜಿಕ ಹೋರಾಟಗಾರ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News