ವೈದ್ಯರ ಮೇಲಿನ ಹಲ್ಲೆಗೆ ಖಂಡನೆ: ಪುತ್ತೂರಿನಲ್ಲಿ ವೈದ್ಯರ ಜಾಥಾ, ಪ್ರತಿಭಟನೆ

Update: 2019-06-17 10:06 GMT

ಪತ್ತೂರು: ವೈದ್ಯರ ಮೇಲೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಪುತ್ತೂರು ಘಟಕದ ವತಿಯಿಂದ ಜಾಥಾ, ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ ಪುತ್ತೂರಿನಲ್ಲಿ ಸೋಮವಾರ ನಡೆಯಿತು.

ಸೋಮವಾರ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು. ವೈದ್ಯರ ರಕ್ಷಣೆಗಾಗಿ ರಾಷ್ಟ್ರ ಮಟ್ಟದ ಕಾನೂನು ಜಾರಿಗೊಳಿಸಬೇಕು. ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಸೂಕ್ತ ಶಿಕ್ಷೆ ನೀಡಬೇಕು. ವೈದ್ಯರಿಗೆ ಭಯಮುಕ್ತವಾಗಿ ಸೇವೆ ಮಾಡುವ ಅವಕಾಶ ಒದಗಿಸಿ ಕೊಡಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

ಪುತ್ತೂರಿನ ಸಿಟಿ ಆಸ್ಪತ್ರೆಯ ಬಳಿಯಿಂದ ಮುಖ್ಯರಸ್ತೆಯಾಗಿ ವೈದ್ಯರು ಕಾಲ್ನಡಿಗೆ ಜಾಥಾದಲ್ಲಿ ಸಾಗಿ ಬಂದು ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮತ್ತು ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಅವರು ನೌಕರರ ಜವಾಬ್ದಾರಿಗಳನ್ನು ಗೌರವಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು, ಹಲ್ಲೆ ನಡೆಸುವುದು ಕಾನೂನಾತ್ಮಕವಾಗಿ ಅಪರಾಧವಾಗಿದೆ. ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವ್ಯವಸ್ಥೆಗಳಿವೆ. ಪುತ್ತೂರು ಉಪವಿಭಾಗದಲ್ಲಿ  ಇಂತಹ ಪ್ರಕರಣಗಳು ನಡೆದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ವೈದ್ಯರಿಂದ ಯಾವುದೇ ರೀತಿಯಲ್ಲಿ ತಪ್ಪುಗಳಾದಲ್ಲಿ ಸಾರ್ವಜನಿಕರು ಕಾನೂನು ರೀತಿಯಲ್ಲಿ ದೂರು ನೀಡಿ ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಐಎಂಎ ಪುತ್ತೂರು ಘಟಕದ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಮುದ್ರಜೆ, ಕಾರ್ಯದರ್ಶಿ ಡಾ. ಅಶೋಕ್, ಪದಾಧಿಕಾರಿಗಳಾದ ಡಾ. ಅಶೋಕ್ ಪಡಿವಾಳ್, ಡಾ. ಸುರೇಶ್ ಪುತ್ತೂರಾಯ, ಡಾ. ಜೆ.ಸಿ. ಅಡಿಗ, ಡಾ. ಎಸ್.ಎಸ್. ಜೋಷಿ, ಡಾ. ಗೋವಿಂದರಾಜ್, ಡಾ. ಹರಿಕೃಷ್ಣ, ಡಾ. ನಝೀರ್ ಅಹ್ಮದ್, ಡಾ. ಕಿಶೋರ್ ಮಯ್ಯ, ಡಾ. ಎ.ಕೆ. ರೈ, ಡಾ. ರವೀಂದ್ರ, ಡಾ. ಎಂ.ಎಸ್. ಶೆಣೈ, ಡಾ. ಈಶ್ವರ ಪ್ರಕಾಶ್ ಮತ್ತಿತರ ವೈದ್ಯರು, ದಾದಿಯರು ಪಾಲ್ಗೊಂಡಿದ್ದರು.

ತುರ್ತು ಸೇವೆ ಮತ್ತು ಒಳರೋಗಿಗಳ ಸೇವೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಯನ್ನು ವೈದ್ಯರು ಸೋಮವಾರ ಸ್ಥಗಿತಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News