ಸಚಿವ ಯು.ಟಿ. ಖಾದರ್ ರಿಂದ ಚಿನ್ಮಯಿಗೆ ಚಿನ್ನದ ಉಡುಗೊರೆ

Update: 2019-06-17 14:40 GMT

ಬಂಟ್ವಾಳ, ಜೂ. 17: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನಿಯಾಗಿರುವ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಕೂಡೂರು ನಿವಾಸಿ ಚಿನ್ಮಯಿ ಅವರ ಮನೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಯು.ಟಿ ಖಾದರ್ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು.

ವಿದ್ಯಾರ್ಥಿಯನ್ನು ಶಾಲು ಹೊದಿಸಿ, ಸನ್ಮಾನಿಸಿ ಚಿನ್ನದ ಕೈ ಚೈನ್ ಹಾಗು ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬಳಿಕ ಸಚಿವರು ಚಿನ್ಮಯಿ ಹಾಗೂ ಕಟುಂಬದವರನ್ನು ಹಾಗೂ ಶಾಲಾ ಪ್ರಾಂಶುಪಾಲರನ್ನು ಅಭಿನಂದಿಸಿದರು.

ಬಳಿಕ ಮಾತನಾಡಿದ ಅವರು ಚಿನ್ಮಯಿ ಅವರ ಸಾಧನೆ ಕೇವಲ ವಿಟ್ಲ ಪರಿಸರಕ್ಕೆ ಮಾತ್ರವಲ್ಲದೇ ಇಡೀ ಜಿಲ್ಲೆಗೆ ಗೌರವ ತಂದಿದೆ. ಈ ಹಿಂದೆಯೇ ಇಲ್ಲಿಗೆ ಬಂದು ಗೌರವಿಸಬೇಕೆಂದು ನಿರ್ಧರಿಸಿದ್ದೆ. ಆದರೆ, ಕೆಲಸದ ಒತ್ತಡದಿಂದ ಸಾಧ್ಯವಾಗಿಲ್ಲ. ಇಂದು ಬಿಡುವು ಮಾಡಿಕೊಂಡು ಬಂದಿದ್ದೇನೆ. ಇವರ ಈ ಸಾಧನೆಗೆ ಕಾರಣಕರ್ತರಾದ ಆಕೆಯ ಹೆತ್ತವರಿಗೆ ಹಾಗೂ ಶಾಲಾ ಶಿಕ್ಷಕರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಚಿನ್ಮಯಿ ಅವರು ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ನಾವೆಲ್ಲ ಸಹಕಾರ ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಉತ್ತಮ ಫಲಿತಾಂಶ ಲಭಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಜಯರಾಮ ರೈ, ಚಿನ್ಮಾಯಿ ಪೋಷಕರಾದ ರಾಜನಾರಾಯಣ ಹಾಗೂ ಗೀತಾ ದಂಪತಿ, ಕುಟುಂಬದ ಹಿರಿಯರು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ರಶೀದ್ ವಿಟ್ಲ, ಹಾರೀಸ್ ಕಾನತ್ತಡ್ಕ, ಮನ್ಸೂರು ಹಾನೆಸ್ಟ್, ಹಾರಿಸ್ ಬೈಕಂಪಾಡಿ, ಯು.ಟಿ. ತೌಸಿಫ್ ಉಪ್ಪಿನಂಗಡಿ, ಅಬೂಬಕರ್ ಅನಿಲಕಟ್ಟೆ, ಮುಹಮ್ಮದ್ ಲಿಬ್ಝತ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News