ಲೋಕಸಭೆಯಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಬಿಜೆಪಿಗರು!

Update: 2019-06-17 14:36 GMT

ಹೊಸದಿಲ್ಲಿ, ಜೂ.17: ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಸೋಮವಾರ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ವೇಳೆ ಬಿಜೆಪಿಯ ಇತರ ಸದಸ್ಯರು ‘ಜೈ ಶ್ರೀರಾಮ್’ ಎಂಬ ಘೋಷಣೆಯನ್ನು ಕೂಗಿ ಸ್ವಾಗತಿಸಿದರು.

 ಇತ್ತೀಚೆಗೆ ನಡೆದ ಘಟನೆಯ ವೇಳೆ ರಾಜ್ಯದಲ್ಲಿ ಜೈ ಶ್ರೀರಾಮ ಘೋಷಣೆ ಕೂಗದಂತೆ ತಡೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ಆಡಳಿತಪಕ್ಷದ ಸದಸ್ಯರು ಈ ಘೊಷಣೆ ಕೂಗಿದ್ದಾರೆ ಎಂದು ಅಭಿಪ್ರಾಯಿಸಲಾಗಿದೆ. ಘಟನೆಯ ಕುರಿತು ಮಾತನಾಡಿದ ಬಂಗಾಳದ ಕೂಚ್ ಬಿಹಾರ್ ಕ್ಷೇತ್ರದ ಬಿಜೆಪಿ ಸಂಸದ ನಿಸಿತ್ ಪ್ರಮಾಣಿಕ್, ಭಾರತದಲ್ಲಿ ವಿವಿಧ ಭಾಷೆಗಳು ಮತ್ತು ಸಂಸ್ಕೃತಿಯ ಜನರು ಜೊತೆಯಾಗಿ ಬಾಳುತ್ತಿದ್ದಾರೆ. “ಜೈ ಶ್ರೀರಾಮ ಎಂಬ ಘೋಷಣೆಯನ್ನು ಕೇವಲ ಬಂಗಾಳದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಕೂಗಲಾಗುತ್ತಿದೆ. ನಾವು ಹುಟ್ಟಿ ಸಾಯುವವರೆಗೂ ಜೈ ಶ್ರೀರಾಮ ಎಂಬ ಘೋಷಣೆಯನ್ನು ಕೇಳುತ್ತೇವೆ. ಹೀಗೆ ಘೋಷಣೆ ಮಾಡುವುದು ಅಪರಾಧವೇನೂ ಅಲ್ಲ. ಆದರೆ ಬಂಗಾಳದಲ್ಲಿ ಕೆಲವರಿಗೆ ಜೈ ಶ್ರೀರಾಮ ಘೋಷಣೆ ಎಂದರೆ ಅಲರ್ಜಿ” ಎಂದು ತಿಳಿಸಿದ್ದಾರೆ.

ಜೈ ಶ್ರೀರಾಮ ಘೋಷಣೆಯ ಮೂಲಕ ಬಿಜೆಪಿ ಮತದಾರರನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News