ಉಡುಪಿ: ಜಿಲ್ಲಾಸ್ಪತ್ರೆಯ ರೋಗಿಗಳ ಸಂಖ್ಯೆಯಲ್ಲಿ ಶೇ.15ರಷ್ಟು ಹೆಚ್ಚಳ

Update: 2019-06-17 15:28 GMT

ಉಡುಪಿ, ಜೂ.17: ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಮೇಲೆ ನಡೆಸಲಾದ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿರುವ ದೇಶವ್ಯಾಪಿ ಮುಷ್ಕರದ ಕರೆಗೆ ಉಡುಪಿ ಜಿಲ್ಲೆಯ ಖಾಸಗಿ ವೈದ್ಯರು ಹಾಗೂ ಆಸ್ಪತ್ರೆಗಳು ಸಂಪೂರ್ಣ ಬೆಂಬಲ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿರುವ 25ಕ್ಕೂ ಅಧಿಕ ಪ್ರಮುಖ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್, ಡಿಸ್ಪೆಸ್ಸರಿ, ಕ್ಲಿನಿಕ್‌ಗಳು ಇಂದು ಬೆಳಗ್ಗೆ 6 ಗಂಟೆಯಿಂದ ಮಂಗಳವಾರ ಬೆಳಗ್ಗೆ 6ಗಂಟೆವರೆಗೆ 24 ಗಂಟೆಗಳ ಕಾಲ ತುರ್ತು ಚಿಕಿತ್ಸೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.

ಮಣಿಪಾಲದ ಕೆಎಂಸಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಹೊರರೋಗಿ ವಿಭಾಗದ ಸೇವೆಯನ್ನು 24ಗಂಟೆಗಳ ಕಾಲ ಸ್ಥಗಿತಗೊಳಿಸಿವೆ. ಆದರೆ ತುರ್ತುಸೇವೆ, ಈಗಾಗಲೇ ದಾಖಲಾಗಿರುವ ಒಳರೋಗಿಗಳ ತಪಾಸಣೆ, ಹೆರಿಗೆ ಸೇವೆಯನ್ನು ಒದಗಿಸಲಾಗಿದೆ ಎಂದು ಐಎಂಎಯ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷ ಡಾ.ಪಿ.ಎಸ್.ಗುರು ಮೂರ್ತಿ ಭಟ್ ತಿಳಿಸಿದ್ದಾರೆ.

ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ: ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಮುಚ್ಚಿರುವುದರಿಂದ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಹೊರರೋಗಿಗಳ ಸಂಖ್ಯೆಯಲ್ಲಿ ಎಂದಿಗಿಂತ ಶೇ.15ರಿಂದ 20ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ತಿಳಿಸಿದ್ದಾರೆ. ಜನರಿಗೆ ಪೂರ್ವಸೂಚನೆ ಇದ್ದುದರಿಂದ ತುರ್ತು ಚಿಕಿತ್ಸೆ ಅಗತ್ಯ ವಿದ್ದವರು ಮಾತ್ರ ಇಂದು ಒಪಿಡಿಗೆ ಆಗಮಿಸಿದ್ದಾರೆ ಎಂದರು.

ನಾವು ಇಂದಿನ ಸನ್ನಿವೇಶಕ್ಕೆ ಸನ್ನದ್ಧರಾಗಿದ್ದೆವು. ಜಿಲ್ಲಾಸ್ಪತ್ರೆಯ ವೈದ್ಯರು, ತಜ್ಞ ವೈದ್ಯರು, ದಾದಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ತಪ್ಪದೇ ಸೇವೆಗೆ ಹಾಜರಿರುವಂತೆ ತಿಳಿಸಿದ್ದು, ಇದರಿಂದ ಎಲ್ಲರೂ ಸೇವೆಗೆ ಲಭ್ಯವಿದ್ದು, ಎಷ್ಟೇ ಮಂದಿ ರೋಗಿಗಳು, ತುರ್ತು ಸೇವೆಗೆ ಬಂದರೂ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ನಾವು ಸನ್ನದ್ಧರಾಗಿದ್ದೆವು ಎಂದು ಡಾ.ನಾಯಕ್ ತಿಳಿಸಿದರು.

ಶೇ.15 ಹೆಚ್ಚಳ: ಜಿಲ್ಲೆಯಲ್ಲಿರುವ 61 ಪ್ರಾಥಮಿಕ ಆರೋಗ್ಯ ಕೇಂದ್ರ, ಆರು ಸಮುದಾಯ ಆರೋಗ್ಯ ಕೇಂದ್ರ, ಎರಡು ತಾಲೂಕು ಆಸ್ಪತ್ರೆಗಳಲ್ಲೂ ರೋಗಿಗಳ ಸಂಖ್ಯೆಯಲ್ಲಿ ಸರಾಸರಿ ಶೇ.15ರಷ್ಟು ಹೆಚ್ಚಳ ಕಂಡುಬಂದಿದೆ. ಈ ರೋಗಿಗಳ ಸೇವೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೇವೆಯಲ್ಲಿರುವ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಇಂದು ಕೆಲಸಕ್ಕೆ ಹಾಜರಾಗಿದ್ದರು. ಹೀಗಾಗಿ ಜಿಲ್ಲೆಯ ಎಲ್ಲೂ ಯಾವುದೇ ರೀತಿಯ ಗೊಂದಲ ಉಂಟಾಗಿಲ್ಲ. ಖಾಸಗಿ ಯವರ ಮುಷ್ಕರದ ಬಗ್ಗೆ ಜನರಿಗೆ ಮಾಹಿತಿ ತಲುಪಿರುವುದು ಇದಕ್ಕೆ ಕಾರಣ ವಾಗಿರಬಹುದು ಎಂದು ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ (ಡಿಎಚ್‌ಒ) ಹಾಗೂ ಜಿಲ್ಲಾ ಆರ್‌ಸಿಎಚ್ ಅಧಿಕಾರಿಯಾಗಿರುವ ಡಾ.ರಾಮ ಎಂ.ಜಿ. ತಿಳಿಸಿದರು.

ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 2255 ಹೊರರೋಗಿಗಳು, 107 ಒಳರೋಗಿಗಳು ಚಿಕಿತ್ಸೆ ಪಡೆದಿದ್ದರೆ, ಉಡುಪಿಯಲ್ಲಿ 1617-33, ಜಿಲ್ಲಾಸ್ಪತ್ರೆಯಲ್ಲಿ 625-45, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 287-50, ಕಾರ್ಕಳದಲ್ಲಿ 1389 ಮಂದಿ ಹೊರರೋಗಿ ವಿಭಾಗ ಹಾಗೂ 35 ಮಂದಿ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾವು ಮೊದಲೇ ಯೋಜನೆ ಯನ್ನು ರೂಪಿಸಿದ್ದರಿಂದ ಎಲ್ಲೂ ರೋಗಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಡಾ.ರಾಮ ವಿವರಿಸಿದರು.

ಮಣಿಪಾಲದಲ್ಲಿ ಕ್ಯಾಂಡಲ್‌ಲೈಟ್ ಜಾಥ

ದೇಶದಲ್ಲಿ ವೈದ್ಯರ ಮೇಲೆ ಹಲ್ಲೆ ಘಟನೆಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಐಎಂಎಯ ಉಡುಪಿ-ಕರಾವಳಿ ಶಾಖೆಯ ನೇತೃತ್ವದಲ್ಲಿ ಇಂದು ರಾತ್ರಿ ಮಣಿಪಾಲದಲ್ಲಿ ಕ್ಯಾಂಡಲ್‌ಲೈಟ್ ಜಾಥಾ ನಡೆಯಿತು.

ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಸಭಾಂಗಣದ ಬಳಿಯಿಂದ ಪ್ರಾರಂಭಗೊಂಡ ಈ ಜಾಥಾ, ಟೈಗರ್ ಸರ್ಕಲ್, ಬಸ್‌ನಿಲ್ದಾಣದ ಮೂಲಕ ಕಸ್ತೂರ್‌ಬಾ ಆಸ್ಪತ್ರೆಯ ಶ್ರೀಮತಿ ಶಾರದಾ ಮಾಧವ ಪೈ ಒಪಿಡಿ ವಿಭಾಗದ ವರೆಗೆ ಸಾಗಿ ಬಂತು. ಐಎಂಎ ಅಧ್ಯಕ್ಷ ಡಾ.ಪಿ.ಎಸ್.ಗುರುಮೂರ್ತಿ ಭಟ್ ಅವರೊಂದಿಗೆ ಪದಾಧಿಕಾರಿಗಳು, ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ವೈದ್ಯರು ಹಾಗೂ ಕೆಎಂಸಿಯ ವೈದ್ಯರು ಜಾಥದಲ್ಲಿ ಪಾಲ್ಗೊಂಡರು.

ಇಂದು ಕೊಲ್ಕತ್ತಾದಲ್ಲಿ ವೈದ್ಯರು ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಸಭೆ ನಡೆಯುತಿದ್ದು, ಇದರಲ್ಲಿ ಯಾವ ರೀತಿಯ ಫಲಿತಾಂಶ ಬರಲಿದೆ ಎಂಬುದರ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಡಾ.ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News