ಅಲ್ಪಸಂಖ್ಯಾತರ ಇಲಾಖೆಗೆ ಅನುದಾನದ ಕೊರತೆ: ಐವನ್ ಡಿಸೋಜ

Update: 2019-06-17 16:19 GMT

ಮಂಗಳೂರು, ಜೂ.17: ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ನೀಡುವ ಯೋಜನೆಗಳಿಗೆ ಫಲಾನುಭವಿಗಳ ಸಂಖ್ಯೆ ಅಧಿಕವಿದ್ದು, ಅನುದಾನದ ಕೊರತೆಯಿದೆ ಎಂದು ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಅಬ್ದುಲ್ ಕಲಾಂ ಆಝಾದ್ ಭವನದಲ್ಲಿ ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹೆಚ್ಚು ಮುಸ್ಲಿಮರು ದ.ಕ. ಜಿಲ್ಲೆಯಲ್ಲೇ ವಾಸವಿದ್ದಾರೆ. ಅಲ್ಪಸಂಖ್ಯಾತರ ಇಲಾಖೆಯಲ್ಲಿ ದಿನದಿಂದ ದಿನಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದೆ. ಕೂಡಲೇ ರಾಜ್ಯ ಸರಕಾರ ಇಲಾಖೆಗೆ ಹೆಚ್ಚುವರಿ ಅನುದಾನ ನೀಡಬೇಕು ಎಂದು ಐವನ್ ಡಿಸೋಜ ಆಗ್ರಹಿಸಿದರು.

ಬಿದಾಯಿ: ಕಳೆದ ರಾಜ್ಯ ಸರಕಾರದ ಮಹತ್ವದ ಬಿದಾಯಿ ಯೋಜನೆ ಅಡಿಯಲ್ಲಿ 2013ರಿಂದ 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 6,218 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 5,463 ಮುಸ್ಲಿಮರು, 724 ಕ್ರೈಸ್ತರು, 31 ಜೈನರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಇನ್ನು 2,123 ಫಲಾನುಭವಿಗಳಿಗೆ ಅನುದಾನ ಹಂಚಿಕೆ ಮಾಡಿಲ್ಲ. ಸರಕಾರದಿಂದ ಹಣ ಬಿಡುಗಡೆಯಾಗದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಬಿದಾಯಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಗೆ ಕಳೆದ ಒಂದೂವರೆ ವರ್ಷದಿಂದ ಅನುದಾನ ಬಿಡುಗಡೆಯಾಗಿಲ್ಲ. ಒಟ್ಟು 10.5 ಕೋಟಿ ರೂ. ಅನುದಾನ ಬಿಡುಗಡೆಗೆ ಬಾಕಿ ಇದೆ. 2018ರ ಮಾರ್ಚ್ 31ರಿಂದ ಇಲ್ಲಿಯವರೆಗೆ 2,011 ಮುಸ್ಲಿಮರಿಗೆ ಅನುದಾನ ಬಿಡುಗಡೆಯಾಗಿಲ್ಲ. ಅದರಂತೆ, 2019ರ ಜನೇವರಿ 26ರಿಂದ 107 ಕ್ರೈಸ್ತರು ಹಾಗೂ 2018ರ ಡಿಸೆಂಬರ್ 30ರಿಂದ 31 ಮಂದಿ ಜೈನರಿಗೆ ಅನುದಾನ ಬಿಡುಗಡೆ ಬಾಕಿ ಇದೆ. ಕೂಡಲೇ ರಾಜ್ಯ ಸರಕಾರವು ಸಮಸ್ಯೆಯನ್ನು ಅರಿತು ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ವಿದ್ಯಾಸಿರಿ: ರಾಜ್ಯದ ಮಹಾತ್ವಾಕಾಂಕ್ಷಿ ಯೋಜನೆಯಾದ ವಿದ್ಯಾಸಿರಿ ಅಡಿಯಲ್ಲಿ ಜಿಲ್ಲೆಯಲ್ಲಿ 7,814 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ ಕೇವಲ 1,900 ವಿದ್ಯಾರ್ಥಿಗಳಿಗೆ ಮಾತ್ರ ಧನಸಹಾಯ ಬಿಡುಗಡೆಯಾಗಿದೆ. ಇನ್ನುಳಿದ 5,914 ವಿದ್ಯಾರ್ಥಿಗಳಿಗೆ ಸಹಾಯಧನ ಬಿಡುಗಡೆಯಾಗಿಲ್ಲ. ವಿದ್ಯಾರ್ಥಿಗಳಿಂದ ಹಲವು ದೂರುಗಳು ಕೇಳಿಬರುತ್ತಿವೆ. ಯೋಜನೆಯಡಿ ಇನ್ನು ಹೆಚ್ಚಿನ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಗತ್ಯವಿದೆ. ಸರಕಾರ ಹೆಚ್ಚುವರಿ ಅನುದಾನ ನೀಡಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರು.

ಶ್ರಮಶಕ್ತಿ: 2018-19ನೇ ಸಾಲಿನಲ್ಲಿ ಶ್ರಮಶಕ್ತಿ ಯೋಜನೆಯಡಿ 1.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕೇವಲ 314 ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ವಿಪರ್ಯಾಸವೆಂದರೆ ಯೋಜನೆಯಡಿ 28,990 ಅರ್ಜಿಗಳು ಸ್ವೀಕೃತಗೊಂಡಿವೆ. ಉಳಿದ 28 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಬೇಸರ ಉಂಟಾಗುತ್ತದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ನೀಡುವಲ್ಲಿ ಗಮನಹರಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ರಾಜ್ಯಾದ್ಯಂತ 600 ಕೋಟಿ ರೂ. ಅನುಮೋದನೆ ದೊರೆತಿದ್ದು, ಇದರಲ್ಲಿ 300 ಕೋಟಿ ರೂ. ಬಿಡುಗಡೆಯಾಗಿದೆ. ಪ್ರಸಕ್ತ ವರ್ಷ ಜಿಲ್ಲೆಗೆ 48 ಕೋಟಿ ರೂ. ಅನುದಾನ ದೊರೆತಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಎಂ.ಸಫ್ವಾನ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಉಸ್ಮಾನ್ ಉಪಸ್ಥಿತರಿದ್ದರು.

10 ಹಾಸ್ಟೆಲ್‌ಗೆ ಓರ್ವ ವಾರ್ಡನ್ !

ಜಿಲ್ಲೆಯಲ್ಲಿ ಮೊರಾರ್ಜಿ ದೇಸಾಯಿ, ಅಲ್ಪಸಂಖ್ಯಾತರ ಇಲಾಖೆಯ 10 ವಸತಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. 10 ವಸತಿನಿಲಯಗಳ ಪೈಕಿ ಕೇವಲ ಒಬ್ಬ ವಾರ್ಡನ್ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಇನ್ನುಳಿದ ವಸತಿ ನಿಲಯಗಳಿಗೆ ಶೀಘ್ರದಲ್ಲಿ ವಾರ್ಡನ್‌ಗಳ ನೇಮಕಾತಿ ಮಾಡಲು ಸರಕಾರದ ಗಮನ ಸೆಳೆಯಾಗುವುದು ಎಂದು ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದರು.

ಮೂರು ವಸತಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. 10 ವಸತಿನಿಲಯಗಳ ಪೈಕಿ ಎರಡು ವಸತಿ ನಿಲಯಗಳು ನಿರ್ಮಾಣ ಹಂತದಲ್ಲಿವೆ. ಬಾಲಕರಿಗಾಗಿ ಕೇವಲ ಒಂದು ವಸತಿ ನಿಲಯವಿದ್ದು, ಮುಂದಿನ ದಿನಗಳಲ್ಲಿ ಇನ್ನೊಂದು ಹಾಸ್ಟೆಲ್ ಮಂಜೂರು ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಬಿದಾಯಿ ಯೋಜನೆಯಡಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ 85 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅದು 120 ಫಲಾನುಭವಿಗಳಿಗೆ ಸಾಕಾಗಲಿದೆ. ಇನ್ನುಳಿದ ಫಲಾನುಭವಿಗಳಿಗೆ ಶೀಘ್ರದಲ್ಲಿ ಅನುದಾನ ಹಂಚಿಕೆ ಮಾಡಲಾಗುವುದು.
- ಎಂ.ಸಫ್ವಾನ್,
ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News