ಅಂತರ್ ಜಿಲ್ಲಾ ಗಾಂಜಾ ಮಾರಾಟ ಜಾಲ ಪತ್ತೆ: ನಾಲ್ವರು ಆರೋಪಿಗಳು ಸೆರೆ

Update: 2019-06-17 16:36 GMT

ಮಂಗಳೂರು, ಜೂ.17: ಮಂಗಳೂರು ಉತ್ತರ ವಿಶೇಷ ಅಪರಾಧ ಪತ್ತೆ ದಳ ಪೊಲೀಸರು ಅಂತರ್ ಜಿಲ್ಲಾ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತು ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ಮಂಗಳೂರಿನ ಕೊಟ್ಟಾರ ಹಾಗೂ ಹಾಲಿ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಕಿರಣ್ ಮೆಂಡನ್ ಯಾನೆ ಕಿರಣ್ (34), ಬಂಟ್ವಾಳ ತಾಲೂಕಿನ ಸಜಿಪಮೂಡ ಸುಭಾಷ್‌ನಗರದ ಆಸಿಫ್ (27), ಮೂಲತಃ ಕುದ್ರೋಳಿ ಹಾಗೂ ಹಾಲಿ ಉಳ್ಳಾಲ ನಿವಾಸಿ ಅಬ್ದುಲ್ ರಹೀಂ ಯಾನೆ ಅಂಕುಶ್ ರಹೀಂ (47), ಬೋಳಿಯಾರು ಕುರ್ನಾಡು ನಿವಾಸಿ ಹಫೀಝ್ ಯಾನೆ ಮೊಯ್ದಿನ್ (33) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 40 ಸಾವಿರ ರೂ. ಮೌಲ್ಯದ ಎರಡು ಕೆ.ಜಿ. ಗಾಂಜಾ, ಎರಡು ಲಕ್ಷ ಮೌಲ್ಯದ ಆಟೊ ರಿಕ್ಷಾ, 30 ಸಾವಿರ ಮೌಲ್ಯದ ಐದು ಮೊಬೈಲ್‌ಗಳು ಸೇರಿದಂತೆ 2.70 ಲಕ್ಷ ಮೌಲ್ಯದ ಸೊತ್ತನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ

ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳವು ಜೂ.16ರಂದು ಸಂಜೆ ನಡೆಯುತ್ತಿದ್ದ ‘ವಿಶ್ವಕಪ್’ ಕ್ರಿಕೆಟ್ ಪಂದ್ಯಾವಳಿ ಸಲುವಾಗಿ ಬಜ್ಪೆ ಪೊಲೀಸ್ ನಿರೀಕ್ಷಕರ ಜತೆಯಲ್ಲಿ ಸುರತ್ಕಲ್ ಚೊಕ್ಕಬೆಟ್ಟು ವ್ಯಾಪ್ತಿಯಲ್ಲಿ ವಿಶೇಷ ಗಸ್ತು ನಡೆಸುತ್ತಿತ್ತು. ಸಂಜೆ 6:30ಕ್ಕೆ ಬಂದ ಖಚಿತ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಲಾಯಿತು.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಕಿರಣ್ ಮೆಂಡನ್ ಮಂಗಳೂರು ಮೂಲಕ ಮಾರಾಟ ಮಾಡಲು ದೊಡ್ಡ ಮೊತ್ತದ ಗಾಂಜಾವನ್ನು ಉಳ್ಳಾಲ ಮತ್ತು ಬಿ.ಸಿ.ರೋಡ್ ಕಡೆಯಿಂದ ಮೂವರು ಆರೋಪಿಗಳು ಆಟೊರಿಕ್ಷಾದಲ್ಲಿ ತೆಗೆದುಕೊಂಡು ಬರುತ್ತಿದ್ದರು. ಅದನ್ನು ಸುರತ್ಕಲ್ ರೈಲು ನಿಲ್ದಾಣ ರಸ್ತೆಯಲ್ಲಿ ಹಸ್ತಾಂತರ ಮಾಡಲು ತರುತ್ತಿದ್ದರು. ಸಂಜೆ ಸುಮಾರು 7 ಗಂಟೆಗೆ ನಿಲ್ದಾಣ ರಸ್ತೆಯಲ್ಲಿ ವ್ಯಕ್ತಿಯೋರ್ವ ನಿಂತಿದ್ದ ಜಾಗಕ್ಕೆ ಆಟೊರಿಕ್ಷಾ ನಿಂತುಕೊಂಡಿತು. ಆಟೊರಿಕ್ಷಾ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಆರೋಪಿಗಳು ಕೆಳಗಿಳಿದು ಗಾಂಜಾವನ್ನು ಹಸ್ತಾಂತರಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಸೊತ್ತನ್ನು ವಶಕ್ಕೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ವಶಕ್ಕೆ ಪಡೆದ ಸೊತ್ತು ಹಾಗೂ ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಮಾರ್ಗದರ್ಶನದಂತೆ ಎಸಿಪಿ ಶ್ರೀನಿವಾಸ್‌ಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾ ನಿರೀಕ್ಷಕ ಪರಶಿವ ಮೂರ್ತಿ, ಸುರತ್ಕಲ್ ಠಾಣಾ ನಿರೀಕ್ಷಕ ರಾಮಕೃಷ್ಣ ಕೆ.ಜಿ., ಮಂಗಳೂರು ಉತ್ತರ ವಿಭಾಗದ ವಿಶೇಷ ಅಪರಾಧ ಪತ್ತೆ ದಳ ಎಸ್ಸೈ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್ ಮತ್ತು ಶರಣ್ ಕಾಳಿ, ಪಣಂಬೂರು ಹಾಗೂ ಸುರತ್ಕಲ್ ಠಾಣಾ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News