ಯುವಕನ ಬೆತ್ತಲೆಗೊಳಿಸಿ ಅವಮಾನ ಪ್ರಕರಣ: ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಪ್ರತಿಭಟನೆ

Update: 2019-06-17 16:58 GMT

ಮಂಗಳೂರು, ಜೂ.17: ಐಎಎಸ್ ಪರೀಕ್ಷೆ ಬರೆದು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಚಾಮರಾಜ ನಗರದ ಗುಂಡ್ಲುಪೇಟೆಯ ವೀರನಪುರ ಗ್ರಾಮದ ದಲಿತ ಯುವಕ ಪ್ರತಾಪ್‌ನನ್ನು ಬೆತ್ತಲೆಗೊಳಿಸಿ ಅವಮಾನಿಸಿದ ಪ್ರಕರಣವನ್ನು ಖಂಡಿಸಿ ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯಿಂದ ಪ್ರತಿಭಟನೆ ನಡೆಸಲಾಯಿತು.

ಸವರ್ಣೀಯರ ಗುಂಪು ಪ್ರತಾಪ್‌ನನ್ನು ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಲ್ಲದೆ, ಕೈಗೆ ಹಗ್ಗ ಕಟ್ಟಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಅವಮಾನ ಮಾಡಲಾಗಿದೆ. ಆ ಬಳಿಕ ವಿದ್ಯಾವಂತನಾದ ಪ್ರತಾಪ್‌ನಿಗೆ ಮಾನಸಿಕ ಅಸ್ವಸ್ಥ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಅಲ್ಲದೆ ದೇವರ ಮೂರ್ತಿ ಕೆಡವಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಪೊಲೀಸ್ ಇಲಾಖೆಯು ತೀರಾ ನಿರ್ಲಕ್ಷ ತಾಳಿ ಅನ್ಯಾಯ ಎಸಗಿದೆ. ಇದು ಖಂಡನೀಯ. ತಕ್ಷಣ ತಪ್ಪಿತಸ್ಥರನ್ನು ಗಡಿಪಾರು ಮಾಡಿ ಸೂಕ್ತ ಕ್ರಮ ಜರಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದಸಂಸ (ಪ್ರೊ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ.ದೇವದಾಸ್, ಜಿಲ್ಲಾ ಸಂಚಾಲಕ ರಘು ಎಕ್ಕಾರ್, ದಸಂಸ ಪರಿವರ್ತನಾವಾದದ ಮೈಸೂರು ವಿಭಾಗ ಸಂಚಾಲಕ ಅಶೋಕ್ ಕೊಂಚಾಡಿ, ಜಿಲ್ಲಾ ಸಂಚಾಲಕ ಸುಧಾಕರ ಬಿ.ಎಸ್., ದಸಂಸ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ, ಶೇಖರ ಹೆಜಮಾಡಿ, ಹಾರನಹಳ್ಳಿ ಶ್ರೀನಿವಾಸ್, ಭಾಸ್ಕರ ಬಜ್ಪೆ, ರಮೇಶ್ ಮುಲ್ಕಿ, ಜಗದೀಶ್ ಸೂಟರ್‌ಪೇಟೆ, ಕಮಲಾಕ್ಷ ಬಜಾಲ್, ಗಣೇಶ್ ಸೂಟರ್‌ಪೇಟೆ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News