ಕಾಪು: ಸೈಕ್ಲೋನ್ ಶೆಲ್ಟರ್ ಲೋಕಾರ್ಪಣೆ

Update: 2019-06-17 17:01 GMT

ಕಾಪು:  ರೂ. 2.45 ಕೋಟಿ ವೆಚ್ಚದಲ್ಲಿ ವಿಶ್ವ ಬ್ಯಾಂಕ್‍ನ ಅನುದಾನಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕಾಪುವಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಾಣಗೊಂಡ ಪ್ರಾಕೃತಿಕ ವಿಕೋಪ ಉಂಟಾಗುವ ಸಂದರ್ಭದಲ್ಲಿ ಸಂತ್ರಸ್ಥರಾಗುವ ಕರಾವಳಿ  ತೀರದ ಜನರಿಗೆ ನಿರ್ಮಾಣಗೊಂಡಿರುವ ಆಶ್ರಯತಾಣ (ಸೈಕ್ಲೋನ್ ಶೆಲ್ಟರ್) ದೆ. ಮಂಗಳವಾರ ಲೋಕಾರ್ಪಣೆಗೊಳ್ಳಲಿದೆ.

ಚಂಡಮಾರುತ ಆಶ್ರಯತಾಣ ಮಂಗಳವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕಂದಾಯ ಸಚಿವರಾದ ಆರ್. ವಿ. ದೇಶಪಾಂಡೆ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಆ ಬಳಿಕ ಅವರು ಸಾರ್ವಜನಿಕರ ಸಮಸ್ಯೆಗಳ ಅಹವಾಲು ಸ್ವೀಕರಿಸಲಿದ್ದಾರೆ.

ಉದ್ಘಾಟನೆಯ ಹಿನ್ನಲೆಯಲ್ಲಿ ಇಂದು ಸಂಜೆ ಎಕ್ಸುಕ್ಯೂಟಿವ್ ಎಂಜಿನಿಯರ್ ಗೋಕುಲ್‍ದಾಸ್, ಸಹಾಯಕ ಎಂಜಿನಿಯರ್ ಜಗದೀಶ್ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಕರಾವಳಿ ತೀರದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಆರು ಕಡೆಗಳಲ್ಲಿ ಈ ಮಾದರಿಯ ಕಟ್ಟಡ ನಿರ್ಮಾಣವಾಗುತ್ತಿದೆ. ಕಾಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಚಂಡ ಮಾರುತದ ಆಶ್ರಯ ತಾಣ ಕಟ್ಟಡವು ಬಹುಉಪಯೋಗಿ ಕಟ್ಟಡದ ಯೋಜನೆಯಾಗಿದೆ.  ಉಳಿದ ಸಮಯಗಳಲ್ಲಿ ಈ ಕಟ್ಟಡವನ್ನು ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯನ್ನಾಗಿ ಬಳಸಿಕೊಳ್ಳಲು ಅವಕಾಶವಿದೆ.

ತುರ್ತು ಉಪಯೋಗಕ್ಕಾಗಿ ಗಂಜಿ ಕೇಂದ್ರದ ಮಾದರಿಯಲ್ಲಿ ಉಪಯೋಗಿಸಲು ಈ ಕಟ್ಟಡ ಸಹಕಾರಿಯಾಗಲಿದೆ. ನೆಲ ಮತ್ತು ಮೊದಲ ಮಹಡಿಯ ಅಂತಸ್ತನ್ನು ಹೊಂದಿರುವ ಕಟ್ಟಡದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿಗಳು ಇದೆ. ಭೋಜನ ಶಾಲೆಯೂ ಇಲ್ಲಿದೆ. ಒಮ್ಮೆಗೆ 750ಕ್ಕೂ ಅಧಿಕ ಮಂದಿ ಆಶ್ರಯ ಪಡೆಯಬಹುದಾಗಿದ್ದು, ವಯೋವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ನೆಲಮಹಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News