​ಕುಂಬ್ರದಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ; ಇಬ್ಬರಿಗೆ ಗಾಯ

Update: 2019-06-17 17:04 GMT

ಪುತ್ತೂರು :  ಒಳಮೊಗ್ರು ಗ್ರಾಮದ ಕುಂಬ್ರ ಸಮೀಪ ಸೋಮವಾರ  ಮಾರುತಿ ಜಿಪ್ಸಿ ವಾಹನವೊಂದು ಖಾಸಗಿ ಬಸ್ಸೊಂದಕ್ಕೆ ಢಿಕ್ಕಿ ಹೊಡೆದು ಬಳಿಕ ಬೈಕಿಗೆ ಢಿಕ್ಕಿಯಾಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದು, ಮೂರೂ ವಾಹನಗಳಿಗೆ ಹಾನಿಯಾಗಿದೆ.

ಕಾಸರಗೋಡಿನ ದೇಲಂಪಾಡಿಯಿಂದ ಜಿತೇಶ್ ಎಂಬವರು ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕನ್ನು ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಾರುತಿ ಜಿಪ್ಸಿ ವಾಹನ ಕುಂಬ್ರ ಸಮೀಪ ಓವರ್‍ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಸುಳ್ಯದ ಲಿಟ್ಲಪ್ಲವರ್ ಗ್ರೂಪಿನ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದು, ಬಳಿಕ ಬೈಕಿಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ. ಡಿಕ್ಕಿಯ ವೇಳೆ ಬಸ್ ರಸ್ತೆ ಬಿಟ್ಟು ರಸ್ತೆ ಬದಿಯ ಗುಡ್ಡ ಹತ್ತಿ ನಿಂತಿದೆ.

ಬೈಕ್ ಸವಾರ ಜಿತೇಶ್ ಅವರ ಪತ್ನಿ ಸವಿತಾ ಮತ್ತು ಮಾರುತಿ ಜಿಪ್ಸಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಮಡಿಕೇರಿಯ ರೋಶನ್ ಅವರ ತಾಯಿ ಸ್ಟೆಪಿನ್ ಪಿಂಟೋ (75) ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ಸ್ಟೆಪಿನ್ ಪಿಂಟೋ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಸವಿತಾ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಚಾಲಕ ಜಿತೇಶ್ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಜಿಪ್ಸಿ ಚಾಲಕ ರೋಶನ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News