ಪಾಕ್: ಸೇನೆ, ಐಎಸ್‌ಐಯನ್ನು ಟೀಕಿಸುತ್ತಿದ್ದ ಬ್ಲಾಗರ್ ಹತ್ಯೆ

Update: 2019-06-17 18:00 GMT

ಇಸ್ಲಾಮಾಬಾದ್, ಜೂ. 17: ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐಯನ್ನು ಟೀಕಿಸುತ್ತಿದ್ದ 22 ವರ್ಷದ ಬ್ಲಾಗರ್ ಮತ್ತು ಪತ್ರಕರ್ತರೊಬ್ಬರನ್ನು ಇಸ್ಲಾಮಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಕಡಿದು ಕೊಂದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಮೃತ ವ್ಯಕ್ತಿಯನ್ನು ಮುಹಮ್ಮದ್ ಬಿಲಾಲ್ ಖಾನ್ ಎಂಬುದಾಗಿ ಗುರುತಿಸಲಾಗಿದೆ. ಅವರು ಟ್ವಿಟರ್‌ನಲ್ಲಿ 16,000, ಯೂ ಟ್ಯೂಬ್ ಚಾನೆಲ್‌ನಲ್ಲಿ 48,000 ಮತ್ತು ಫೇಸ್‌ಬುಕ್‌ನಲ್ಲಿ 22,000 ಫಾಲೋವರ್ಗಳನ್ನು ಹೊಂದಿದ್ದರು. ಅವರು ಸ್ವತಂತ್ರ (ಫ್ರೀಲ್ಯಾನ್ಸ್) ಪತ್ರಕರ್ತನೂ ಆಗಿದ್ದರು.

ರವಿವಾರ ರಾತ್ರಿ ಅವರು ಇಸ್ಲಾಮಾಬಾದ್‌ನ ಬಾರಾ ಕಹು ಎಂಬ ಸ್ಥಳದಲ್ಲಿ ಸ್ನೇಹಿತನೊಬ್ಬನ ಜೊತೆಗಿದ್ದಾಗ, ಜಿ-9 ಎಂಬ ಸ್ಥಳಕ್ಕೆ ಬರುವಂತೆ ಸೂಚಿಸಿ ಕರೆಯೊಂದು ಬಂತು. ಅಲ್ಲಿಂದ ವ್ಯಕ್ತಿಯೊಬ್ಬನು ಅವರನ್ನು ಅರಣ್ಯಕ್ಕೆ ಕರೆದೊಯ್ದನು ಎಂದು ಪೊಲೀಸರನ್ನು ಉಲ್ಲೇಖಿಸಿ ‘ಡಾನ್ ನ್ಯೂಸ್’ ವರದಿ ಮಾಡಿದೆ.

ಶಂಕಿತನು ಬಿಲಾಲ್ ಖಾನ್‌ರನ್ನು ತಲವಾರಿನಿಂದ ಕಡಿದು ಕೊಂದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಘಟನೆಯಲ್ಲಿ ಬಿಲಾಲ್ ಖಾನ್‌ರ ಸ್ನೇಹಿತನೂ ಗಾಯಗೊಂಡಿದ್ದಾರೆ.ಸೇನೆ ಮತ್ತು ಐಎಸ್‌ಐ ವಿರುದ್ಧ ಮಾಡುತ್ತಿದ್ದ ಟೀಕೆಗಳಿಗಾಗಿ ಅವರನ್ನು ಕೊಲ್ಲಲಾಗಿದೆ ಎಂಬುದಾಗಿ ಹಲವು ಟ್ವಿಟರ್ ಬಳಕೆದಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News