ದ್ರೋಣಾಚಾರ್ಯ ಪ್ರಶಸ್ತಿ ವಿಜೇತ, ಅಥ್ಲೀಟ್ ಗಳ ಹಿರಿಯ ಕೋಚ್ ಲಿಂಗಪ್ಪ ನಿಧನ

Update: 2019-06-18 14:55 GMT

 ಬೆಂಗಳೂರು, ಜೂ.18: ದ್ರೋಣಾಚಾರ್ಯ ಪ್ರಶಸ್ತಿ ವಿಜೇತ, ಅಥ್ಲೀಟ್ ಗಳ ಹಿರಿಯ ಕೋಚ್ ಎನ್.ಲಿಂಗಪ್ಪ ವೃದ್ದಾಪ್ಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ತನ್ನ ನಿವಾಸದಲ್ಲಿ ಮಂಗಳವಾರ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಲಿಂಗಪ್ಪ ಅವರಿಗೆ ಕೋಚ್ ಆಗಿ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ 2014ರಲ್ಲಿ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ಒಲಿದು ಬಂದಿತ್ತು.

ತನ್ನ ಯಶಸ್ವಿ ಕೋಚಿಂಗ್ ವೃತ್ತಿಜೀವನದಲ್ಲಿ ಲಿಂಗಪ್ಪ ಅವರು ಅಂತರ್‌ರಾಷ್ಟ್ರೀಯ ಅಥ್ಲೀಟ್‌ಗಳಾದ ಅಶ್ವಿನಿ ನಾಚಪ್ಪ ಹಾಗೂ ವಂದನಾ ರಾವ್, ಮಾಜಿ ರಾಷ್ಟ್ರೀಯ ಮ್ಯಾರಥಾನ್ ಚಾಂಪಿಯನ್ ಡಿ.ವೈ.ಬಿರಾದಾರ್, ಉದಯ ಪ್ರಭು ಹಾಗೂ ಪಿ.ಸಿ.ಪೊನ್ನಪ್ಪ(1970ರ ಏಶ್ಯನ್ ಗೇಮ್ಸ್ 400 ಮೀ. ಬೆಳ್ಳಿ ಪದಕ ವಿಜೇತ)ಸಹಿತ ಹಲವರಿಗೆ ತರಬೇತಿ ನೀಡಿದ್ದರು.

10 ಕಿ.ಮೀ. ವಾಕರ್ ಆಗಿದ್ದ ಲಿಂಗಪ್ಪ 1954ರ ಮನಿಲಾ ಏಶ್ಯನ್ ಗೇಮ್ಸ್‌ನಲ್ಲಿ ಅರ್ಹತೆ ಪಡೆದಿದ್ದರು. ಆದರೆ,ಆ ಕ್ರೀಡಾಕೂಟ ರದ್ದುಗೊಂಡಿತ್ತು. 1954ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಮೊದಲ ಆವೃತ್ತಿಯ ರಾಷ್ಟ್ರೀಯ ಗೇಮ್ಸ್‌ನಲ್ಲಿ 10 ಮೀ. ವಾಕ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಲಿಂಗಪ್ಪ ಭಾರತೀಯ ಅಥ್ಲೆಟಿಕ್ ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.

 ಕರ್ನಾಟಕ ರಾಜ್ಯ ದಸರ ಪ್ರಶಸ್ತಿ(1987),ರಾಜ್ಯೋತ್ಸವ ಪ್ರಶಸ್ತಿ(1994), ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಶನ್ ಪ್ರಶಸ್ತಿ(2002) ಹಾಗೂ ಕೆಂಪೇಗೌಡ ಪ್ರಶಸ್ತಿ(2002)ಗಳು ಲಿಂಗಪ್ಪ ಅವರಿಗೆ ಲಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News