ಮಹಿಳೆ ಶಿಕ್ಷಣ ಪಡೆದಲ್ಲಿ ಮಕ್ಕಳ ಭವಿಷ್ಯ ಉಜ್ವಲ: ಅಲೀ ತಂಙಳ್ ಕುಂಬೋಳ್

Update: 2019-06-18 12:19 GMT

ಪುತ್ತೂರು: ಪ್ರಸ್ತುತ ಕಾಲದಲ್ಲಿ ಮಹಿಳೆಯರು ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದ್ದು, ಸ್ತ್ರೀಯರು ಶಿಕ್ಷಣ ಪಡೆದಲ್ಲಿ ಮುಂದೆ ಅವರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಯ್ಯದ್ ಅಲೀ ತಂಙಳ್ ಕುಂಬೋಳ್ ಹೇಳಿದರು.

ಅವರು ಸೋಮವಾರ ಪುತ್ತೂರು ತಾಲೂಕಿನ ಗಡಿ ಪ್ರದೇಶದಲ್ಲಿನ ಈಶ್ವರಮಂಗಲ ಸಮೀಪದ ಮೇನಾಲದಲ್ಲಿ ನೂತನವಾಗಿ ಪ್ರಾರಂಭಿಸಲಾದ 'ಫಾತಿಮ ಮಹಿಳಾ ಕಾಲೇಜ್'ನ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇಸ್ಲಾಂ ಧರ್ಮ ಶಿಕ್ಷಣವನ್ನು ಪ್ರೋತ್ಸಾಹಿಸಿದೆ. ಮಕ್ಕಳ ಭವಿಷ್ಯ ಅರಳಬೇಕಾದಲ್ಲಿ ಸ್ತ್ರೀಯರು ಮೌಲ್ಯಾಧಾರಿತ ಶಿಕ್ಷಣ ಪಡೆಯಬೇಕು. ಈ ನಿಟ್ಟಿನಲ್ಲಿ ಹೆತ್ತವರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಗಮನ ಹರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಫಾತಿಮಾ ಮಹಿಳಾ ಕಾಲೇಜ್‍ನ ಶರೀಅತ್ ವಿಭಾಗದ ಪ್ರಾಂಶುಪಾಲ ಶಿಹಾಬುದ್ದೀನ್ ಮುಸ್ಲಿಯಾರ್ ಮಾತನಾಡಿ ಮಹಿಳೆಯರಿಗೆ ಲೌಕಿಕ ಶಿಕ್ಷಣದ ಜೊತೆಗೆ ಶರೀಅತ್‍ನಂತಹ ಧಾರ್ಮಿಕ ಶಿಕ್ಷಣವೂ ಅತೀ ಅಗತ್ಯವಾಗಿದೆ. ಮಹಿಳೆಯರಿಗೆ ಶಿಕ್ಷಣ ನೀಡುವ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು ಎಂದರು. 

ಮೇನಾಲ ಮಧುರಾ ಸ್ಕೂಲ್‍ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮಾತನಾಡಿ ಮಹಿಳೆಯರಿಗೆ ಶಿಕ್ಷಣದ ದೂರದೃಷ್ಠಿತ್ವದಲ್ಲಿ ಫಾತಿಮಾ ಮಹಿಳಾ ಕಾಲೇಜು ಆರಂಭಿಸಲಾಗಿದ್ದು, ಕಾಲೇಜ್‍ನ ಮುಂದುವರಿಕೆಗೆ ಎಲ್ಲರ ಸಹಾಯ ಸಹಕಾರ ಬೇಕಾಗಿದೆ. ರಾಜ್ಯದ ಗಡಿ ಭಾಗದಲ್ಲಿ ಆರಂಭಗೊಂಡಿರುವ ಈ ಕಾಲೇಜು ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆಯಬೇಕಾಗಿದೆ ಎಂದರು. 

ಕುಂಬ್ರ ರೇಂಜ್ ಜಮೀಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಶುದ್ದೀನ್ ದಾರಿಮಿ, ಪಳ್ಳತ್ತೂರು ಮಸೀದಿ ಖತೀಬ್ ಅಬ್ದುಲ್ ರಹಿಮಾನ್ ಫೈಝಿ, ಫಾಳ್ಯತ್ತಡ್ಕ ಖತೀಬ್ ಇಸಾಕ್ ದಾರಿಮಿ ಮತ್ತಿತರರು ಮಾತನಾಡಿ ಶುಭ ಹಾರೈಸಿದರು. 

ವೇದಿಕೆಯಲ್ಲಿ ಫಾತಿಮ ಮಹಿಳಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಮಧುರಾ, ಕುಂಬ್ರ ರೇಂಜ್ ಮದ್ರಸ ಮೆನೇಜ್‍ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಹಿರಾ, ಮಧುರಾ ಸ್ಕೂಲ್‍ನ ಸಂಚಾಲಕ ಹಾಜಿ ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು. 
ಶಾಫಿ ಅಹ್ಸನಿ ಮೇನಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News