17 ದಿನಗಳ ನಂತರ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ನಿತೀಶ್ ಗೆ "ವಾಪಸ್ ಜಾವೋ'' ಘೋಷಣೆಯ ಸ್ವಾಗತ

Update: 2019-06-18 12:48 GMT

ಪಾಟ್ನಾ: ಮುಝಫ್ಫರಪುರ್ ನಲ್ಲಿ ಕಳೆದ 17 ದಿನಗಳಿಂದ ಮಕ್ಕಳು ಮೆದುಳಿನ ಉರಿಯೂತಕ್ಕೆ ಬಲಿಯಾಗುತ್ತಿದ್ದರೂ ಇಂದು ಮೊದಲ ಬಾರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವಎಇಗೆ ಆಕ್ರೋಶಿತ ಹೆತ್ತವರು ಹಾಗೂ ಸಾರ್ವಜನಿಕರಿಂದ “ವಾಪಸ್ ಜಾವೋ” (ಹಿಂದಕ್ಕೆ ಹೋಗಿ) ಎಂಬ ಘೋಷಣೆಗಳನ್ನು ಕೇಳಬೇಕಾಗಿ ಬಂತು. ಮುಖ್ಯಮಂತ್ರಿ ಇಷ್ಟೊಂದು ತಡವಾಗಿ ಇಲ್ಲಿಗೆ ಭೇಟಿ ನೀಡುತ್ತಿರುವುದೇಕೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಆಸ್ಪತ್ರೆಯ ಅಧಿಕಾರಿಗಳಿಗೆ ರೋಗಿಗಳ ಆರೈಕೆಗಿಂತ ಮುಖ್ಯಮಂತ್ರಿಯ ಭೇಟಿಯೇ ಹೆಚ್ಚು ಮಹತ್ವದ್ದಾಗಿದೆ ಎಂದು ದೂರಿದರು.

“ಮುಖ್ಯಮಂತ್ರಿ ಮೊದಲೇ ಭೇಟಿ ನೀಡುತ್ತಿದ್ದರೆ ಆಸ್ಪತ್ರೆಯ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಹಲವು ಜೀವಗಳನ್ನು ಉಳಿಸಬಹುದಾಗಿತ್ತು'' ಎಂದು ಪ್ರತಿಭಟನಾನಿರತರಲ್ಲಿ ಕೆಲವರು ಹೇಳುತ್ತಿರುವುದು ಕೇಳಿಸಿದೆ.

ಈ ಮಾರಕ ರೋಗವು ಇಲ್ಲಿಯ ತನಕ 126 ಮಕ್ಕಳನ್ನು ಬಲಿ ಪಡೆದಿದ್ದು, 107 ಮಕ್ಕಳು ಮುಝಫ್ಫರಪುರ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

ನಿತೀಶ್ ಕುಮಾರ್ ಜತೆ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೂಡ ಇದ್ದರು. ಇಬ್ಬರೂ ಎಸ್‍ಕೆಎಂಸಿಎಚ್ ಆಸ್ಪತ್ರೆಯಲ್ಲಿದ್ದ ಮಕ್ಕಳ ಹೆತ್ತವರ ಜತೆ ಮಾತನಾಡಿದರಾದರೂ ಪ್ರತಿಭಟನಾಕಾರರ ಜತೆ ಯಾವುದೇ ಮಾತುಕತೆ ನಡೆಸಿಲ್ಲ.

ಮಕ್ಕಳಿಗೆ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಮುಖ್ಯಮಂತ್ರಿ ಸಮಾಧಾನ ವ್ಯಕ್ತಪಡಿಸಿದರಲ್ಲದೆ ಪ್ರತಿ ದಿನ ಅಪರಾಹ್ನ 3 ಗಂಟೆಗೆ ಆರೋಗ್ಯ ಬುಲೆಟಿನ್ ಬಿಡುಗಡೆಗೊಳಿಸುವಂತ ಆದೇಶಿಸಿದ್ದಾರೆಂದು ಆಸ್ಪತ್ರೆಯ ಸುಪರಿಂಟೆಂಡೆಂಟ್ ಎಸ್ ಕೆ ಶಾಹಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸುವುದು ಎಂದು ನಿತೀಶ್ ಕುಮಾರ್ ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News