‘ಯೋಜನೆಗಳನ್ನು ಅನುಷ್ಠಾಗೊಳಿಸಿ; ಇಲ್ಲವೇ ಪರಿಣಾಮ ಎದುರಿಸಿ’

Update: 2019-06-18 14:42 GMT

ಉಡುಪಿ, ಜೂ.18: ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಮಂಗಳವಾರ ತಮ್ಮ ಉಡುಪಿ ಜಿಲ್ಲಾ ಭೇಟಿಯ ವೇಳೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ನಡೆಸಿದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ‘ಕ್ಲಾಸ್’ ತೆಗೆದು ಕೊಂಡು ‘ಕೆಲಸದ ಪಾಠ’ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಿದಂತಿತ್ತು.

ಬರ ಪರಿಹಾರ, ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ಕೈಗೊಂಡ ಕಾರ್ಯ ಹಾಗೂ ಸ್ವಚ್ಛತಾ ಆಂದೋಲನವನ್ನು ಗ್ರಾಪಂ ಮಟ್ಟದಲ್ಲಿ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ‘ಅನುಭವಿ’ ಸಚಿವರಾದ ಆರ್.ವಿ. ದೇಶಪಾಂಡೆ ಕೇಳಿದ ಪ್ರಶ್ನೆಗಳಿಗೆ ಹೆಚ್ಚಿನ ಅಧಿಕಾರಿಗಳು ತಡಬಡಾಯಿಸಿಬಿಟ್ಟರು. ಹೆಚ್ಚೇನೂ ಪೂರ್ವಸಿದ್ಧತೆಗಳೊಂದಿಗೆ ಬಾರದಿದ್ದ ಈ ಅಧಿಕಾರಿಗಳು, ಪ್ರಶ್ನೆ, ಉಪಪ್ರಶ್ನೆಗಳಿಗೆ ಉತ್ತರ ಹೇಳಲಾಗದೆ ಆಕಾಶ-ಭೂಮಿಯನ್ನು ದಿಟ್ಟಿಸುತ್ತಾ ನಿಲ್ಲುವಂತಾಯಿತು.

ದೇಶಪಾಂಡೆಯವರ ಮೊನಚು ಪ್ರಶ್ನೆಗಳು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ.ರೂಪೇಶ್ ಅವರನ್ನೂ ಬಿಡಲಿಲ್ಲ. ಇಬ್ಬರನ್ನೂ ಆಗಾಗ ತರಾಟೆಗೆ ತೆಗೆದು ಕೊಳ್ಳುತ್ತಾ ಅಧಿಕಾರಿಗಳ ಮೇಲೆ ಇನ್ನಷ್ಟು ಪ್ರಖರ ಪ್ರಶ್ನೆಗಳ ಬಾಣಗಳನ್ನು ಬಿಡುತಿದ್ದರು.

ಮೂರು ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರ್‌ಗಳು ಹಾಗೂ ಇತರ ಕಂದಾಯ ಅಧಿಕಾರಿಗಳು ಸಚಿವರ ಕಂಗೆಣ್ಣಿಗೆ ಮೊದಲ ಗುರಿಯಾಗಿದ್ದರು. ಬರ ಪರಿಹಾರ, ಕುಡಿಯುವ ನೀರನ್ನು ಜನರಿಗೆ ನೀಡಲು ಹಾಗೂ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲು ಸರಕಾರದ ಬಳಿ ಹಣಕ್ಕೆ ಕೊರತೆ ಇಲ್ಲ. ಈಗಾಗಲೇ ಜಿಲ್ಲೆಗೆ ಒಟ್ಟು 24 ಕೋಟಿ ರೂ.ಗಳನ್ನು ಜಿಲ್ಲಾದಿಕಾರಿಗಳಿಗೆ ನೀಡಲಾಗಿದೆ. ಕೇಳಿದರೆ ಇನ್ನಷ್ಟು ನೀಡಲು ಸರಕಾರ ಸಿದ್ಧವಿದೆ. ಆದರೆ ಅದರ ಪ್ರಯೋಜನ ಜನರಿಗೆ ತಲುಪುವಂತಾಗಬೇಕು ಎಂಬುದು ನನಗೆ ಮುಖ್ಯ ಎಂದು ಅವರು ಪದೇ ಪದೇ ಅಧಿಕಾರಿಗಳಿಗೆ ತಿಳಿಸುತಿದ್ದರು.

ಕೇವಲ ಸಮಿತಿಗಳನ್ನು ರಚಿಸಿ, ಸುತ್ತೋಲೆಗಳನ್ನು ಕಳುಹಿಸಿದರೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಕೆಲಸದ ಬೆನ್ನು ಹತ್ತಿ, ಗ್ರಾಮಗಳಿಗೆ ತೆರಳಿ ಕೆಲಸವಾಗಿದೆಯೆ ಎಂಬುದನ್ನು ಪರಿಶೀಲಿಸಬೇಕು. ಎಷ್ಟು ಗ್ರಾಮಗಳಿಗೆ ಭೇಟಿ ನೀಡಿ ಯೋಜನೆ ಅನುಷ್ಠಾನಗೊಂಡಿರುವುದನ್ನು ಪರಿಶೀಲಿಸಿದ್ದೀರಿ ಎಂದು ಸಚಿವರು, ಜಿಲ್ಲಾಧಿಕಾರಿ ಹಾಗೂ ಸಿಇಓರನ್ನು ನೇರವಾಗಿ ಪ್ರಶ್ನಿಸಿದರು.

‘ಹೋಗಲಿ, ಎಷ್ಟು ಮಂದಿ ಇಓಗಳು, ತಹಶೀಲ್ದಾರರು, ನೋಡೆಲ್ ಅದಿಕಾರಿಗಳು ಗ್ರಾಮಗಳಿಗೆ ತೆರಳಿ, ಒಳಚರಂಡಿ ಸ್ವಚ್ಚತೆಯನ್ನು, ನೀರಿನ ಕೊರೆತ ಎದುರಿಸುತಿದ್ದ ಗ್ರಾಮಗಳಿಗೆ ಟ್ಯಾಂಕರ್ ನೀರಿನ ಸರಬರಾಜು ಆಗುತ್ತಿರುವುದನ್ನು ಪರಿಶೀಲಿಸಿದ್ದೀರಿ.’ ಎಂದು ನೇರವಾಗಿ ಪ್ರಶ್ನಿಸಿದ ದೇಶಪಾಂಡೆ, ಕೆಲ ಹೊತ್ತು ಕೆಲಸ ಹೇಗೆ ಮಾಡಬೇಕು ಎಂಬ ಬಗ್ಗೆ ಪಾಠವನ್ನೂ ಮಾಡಿದರು.

‘ನೀವು ನನ್ನ ಬಳಿ ಸುಳ್ಳು ಹೇಳಬೇಡಿ, ತಪ್ಪು ಲೆಕ್ಕ ಕೊಡಬೇಡಿ. ನಾನು ಸುಲಭದಲ್ಲಿ ಬಿಡುವುದಿಲ್ಲ. ಅವುಗಳ ಬೆನ್ನುಹತ್ತಿ ನೀವು ಹೇಳಿರುವುದನ್ನೇಲ್ಲಾ ಪರಿಶೀಲಿಸುತ್ತೇನೆ. ಲೆಕ್ಕಪತ್ರ ನೋಡುತ್ತೇನೆ. ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳಬೇಡಿ.’ ಎಂದು ಅಧಿಕಾರಿಗಳನ್ನು ಚುಚ್ಚಿದರು.

ಸಮರ್ಪಕ ಉತ್ತರ ನೀಡದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಆರ್. ವಿ.ದೇಶಪಾಂಡೆ ತಕ್ಷಣ ಪಂಚಾಯತ್‌ಗಳಿಗೆ ತೆರಳಿ ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾದೀತು ಅಂತ ಖಡಕ್ ಎಚ್ಚರಿಕೆಯನ್ನೂ ಕೊಟ್ಟರು. ಬರ ಹಾಗೂ ಕುಡಿಯುವ ನೀರಿನ ತೊಂದರೆಯಲ್ಲಿ ರುವ ಜನರ ನೆರವಿಗೆ ಧಾವಿಸುವಂತೆ ತಾಕೀತು ಮಾಡಿದರು.

ಇನ್ನು 15 ದಿನಗಳಲ್ಲಿ ಎಲ್ಲಾ ಗ್ರಾಪಂಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದ ಅವರು, ಶೀಘ್ರವೇ ಇನ್ನೊಮ್ಮೆ ಉಡುಪಿ ಜಿಲ್ಲೆಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸುವುದಾಗಿ ಎಚ್ಚರಿಕೆಯನ್ನು ನೀಡಿದರು. ಉಡುಪಿಗೆ ಬಾರದಿದ್ದರೂ, ಬೆಂಗಳೂರಿನಲ್ಲಿ ಕುಳಿತೇ ಇಲ್ಲಿ ನಡೆದಿರುವ ಎಲ್ಲಾ ಕೆಲಸ, ಯೋಜನೆಯ ಅನುಷ್ಠಾನದ ಬಗ್ಗೆ ಮಾಹಿತಿ ಕಲೆ ಹಾಕಿರುವುದಾಗಿ ತಿಳಿಸಿದರು.

ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲಾ ಜನರನ್ನು ಸೇರಿಸಿಕೊಂಡು ಇನ್ನು ಹತ್ತು ದಿನದಲ್ಲಿ ಸ್ವಚ್ಛತಾ ಆಂದೋಲವನ್ನು ಜಿಲ್ಲೆಯಾದ್ಯಂತ ಮಾಡಬೇಕು. ಇದಕ್ಕೆ ಜನರ ಸಹಕಾರವನ್ನು ಮುಖ್ಯವಾಗಿ ತೆಗೆದುಕೊಳ್ಳಿ. ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಈಗಲೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ನೀರನ್ನು ಸರಬರಾಜು ಮಾಡುವಂತೆ ಅವರು ಸೂಚಿಸಿದರು.

ಜಿಲ್ಲೆಯ 9 ಗ್ರಾಮಗಳಲ್ಲಿ ಈಗಲೂ ಟ್ಯಾಂಕರ್ ನೀರು ಸರಬರಾಜು ಆಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮೇಲ್ಮನೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರು ಕುಂದಾಪುರ ತಾಲೂಕಿನ ಮಡಾಮಕ್ಕಿ ಗ್ರಾಮಕ್ಕೆ ಟ್ಯಾಂಕರ್ ನೀರು ನಿಲ್ಲಿಸಿರುವುದನ್ನು ಸಚಿವರ ಗಮನಕ್ಕೆ ತಂದಾಗ, ಆ ಗ್ರಾಮಕ್ಕೆ ಅಗತ್ಯವಿರುವವರೆಗೆ ಟ್ಯಾಂಕರ್ ನೀರು ಸರಬರಾಜು ಮಾಡುವಂತೆ ತಿಳಿಸಿದರು.

ಉಡುಪಿ ನಗರಸಭೆ ಅನುಭವಿಸಿದ ಕುಡಿಯುವ ನೀರಿನ ಸಮಸ್ಯೆಯನ್ನು ವಿವರಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಈ ಬಾರಿ ನಗರಸಭೆ ವತಿಯಿಂದ ಟ್ಯಾಂಕರ್ ಮೂಲಕ ನೀರನ್ನು ನೀಡಿದ್ದೆ ಇಲ್ಲ. ಕೇವಲ ನಾಲ್ಕು ವಾರ್ಡುಗಳಲ್ಲಿ ಮಾತ್ರ ನೀರು ನೀಡಲಾಗಿತ್ತು, ಉಳಿದ 31 ವಾರ್ಡುಗಳ ಜನರಿಗೆ ಅಲ್ಲಿನ ಸದಸ್ಯರು ಹಾಗೂ ತಾನು ಕೈಯಾರೆ ಖರ್ಚು ಮಾಡಿ ಜನರಿಗೆ ನೀರು ನೀಡಿದ್ದೇವೆ ಎಂದು ದೂರು ನೀಡಿದರು. ಈ ಬಗ್ಗೆ ಅಧಿಕಾರಿಗಳನ್ನು ಕರೆದು ಪೂರ್ಣ ಮಾಹಿತಿ ಪಡೆದ ಸಚಿವರು, ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಕೋಟ ಶ್ರೀನಿವಾಸ ಪೂಜಾರಿ, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News