​ಮಣಿಪಾಲ: ಮಂಚಿಕೆರೆ ಭೂಮಿಯಲ್ಲಿ ಮತ್ತೆ ಕಾಣಿಸಿಕೊಂಡ ಬಿರುಕು

Update: 2019-06-18 15:19 GMT

ಉಡುಪಿ, ಜೂ.18: ಕಳೆದ ಐದು ವರ್ಷಗಳ ಹಿಂದೆ 80 ಬಡಗುಬೆಟ್ಟು ಗ್ರಾಪಂ ವ್ಯಾಪ್ತಿಯ ಮಣಿಪಾಲ- ಅಲೆವೂರು ರಸ್ತೆಯ ಮಂಚಿಕೆರೆ ಎಂಬಲ್ಲಿ ರುವ ನಾಗಬ್ರಹ್ಮಸ್ಥಾನದ ಎದುರಿನ ಎರಡನೆ ಅಡ್ಡರಸ್ತೆಯ ಭೂಮಿಯಲ್ಲಿ ಕಂಡು ಬಂದಿರುವ ಬಿರುಕು ಇದೀಗ ಇನ್ನಷ್ಟು ಹಿರಿದಾಗಿದ್ದು, ಇಲ್ಲಿನ ಮನೆ ಹಾಗೂ ಬಾವಿಗಳಿಗೆ ಹಾನಿ ಉಂಟು ಮಾಡಿರುವ ಈ ಬಿರುಕಿನಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

2014ರ ಜುಲೈ ತಿಂಗಳಲ್ಲಿ ಈ ಪರಿಸರದಲ್ಲಿ ಭೂಮಿ ಬಿರುಕು ಬಿಟ್ಟಿರುವ ವಿಚಾರ ಸ್ಥಳೀಯ ಗಮನಕ್ಕೆ ಬಂದಿದ್ದು, ಆಗ ಸುಮಾರು ನೂರು ಮೀಟರ್ ಉದ್ದದವರೆಗೆ ಭೂಮಿ ಬಾಯ್ದೆರೆದಿರುವುದು ಕಂಡುಬಂದಿತ್ತು. ಅದೇ ಸಮಯ ದಲ್ಲಿ ಎರಡು ಮೂರು ತಿಂಗಳ ಹಿಂದೆ ಮಂಚಿಕೆರೆಯಿಂದ ಸುಮಾರು ಏಳು ಕಿ.ಮೀ. ದೂರದ ಪರ್ಕಳದಲ್ಲಿ ಕಡು ಬೇಸಿಗೆಯಲ್ಲಿ ನೀರುಕ್ಕಿ ಹರಿದು ತೊರೆ, ಬಾವಿಗಳು ತುಂಬಿದ್ದವು.

ಪರ್ಕಳದ ಅಂತರ್ಜಲದ ಒರೆತಕ್ಕೂ ಮಂಚಿಕೆರೆಯ ಭೂಮಿ ಬಿರುಕಿಗೂ ನಂಟಿರಬಹುದು ಮತ್ತು ಇದು ಭೂಮಿಯೊಳಗೆ ಸಣ್ಣಪ್ರಮಾಣದ ಭೂಕಂಪನ ದಿಂದ ಆಗಿರುವ ಪ್ರಕ್ರಿಯೆ ಎಂಬುದಾಗಿ ಸ್ಥಳಕ್ಕೆ ಆಗಮಿಸಿ ಅಧ್ಯಯನ ನಡೆಸಿದ್ದ ಭೂಗರ್ಭ ತಜ್ಞರ ತಂಡ ಅಭಿಪ್ರಾಯಪಟ್ಟಿತ್ತು.
ಸಂಪೂರ್ಣ ಮುರಕಲ್ಲಿನಿಂದ ಕೂಡಿರುವ ಮಂಚಿಕೆರೆಯ ನಾಲ್ಕು ದಿಕ್ಕು ಗಳಲ್ಲಿಯೂ ಗುಹೆಗಳಿದ್ದು, ಉತ್ತರದಲ್ಲಿ ಪಾಂಡವರ ಗುಹೆ, ಪಶ್ಚಿಮದಲ್ಲಿ ದುಗ್ಗಿ ಪದವು ಗುಹೆ, ಪೂರ್ವದಲ್ಲಿ ಮಣ್ಣಪಳ್ಳ ಗುಹೆ, ದಕ್ಷಿಣದಲ್ಲಿ ಪ್ರಗತಿನಗರ ಗುಹೆಗಳಿವೆ.

ಭೂಮಿಯ ಬಿಕುರು ವಿಸ್ತಾರ: ಮಂಚಿಕೆರೆಯಲ್ಲಿನ ರಸ್ತೆ, ಮನೆ ಗೋಡೆ ಗಳಲ್ಲಿ ಬಿಟ್ಟಿರುವ ಬಿರುಕುಗಳು ಹಿರಿದಾಗಿರುವುದನ್ನು ಒಂದು ತಿಂಗಳ ಹಿಂದೆ ಸ್ಥಳೀಯರು ಗಮನಿಸಿದ್ದರು. 2014ರಲ್ಲಿ 2-3 ಅಡಿ ಅಗಲ ಇದ್ದ ಬಿರುಕು ಈಗ 6 ಅಡಿ ಅಗಲವಾಗಿರುವುದು ಕಂಡುಬಂದಿದೆ.

ಈ ಪರಿಸರದಲ್ಲಿ ಸುಮಾರು 200- 250 ಮನೆಗಳಿದ್ದು, ಸುಮಾರು 300 ಮೀಟರ್ ವ್ಯಾಪ್ತಿಯಲ್ಲಿ ಈ ಬಿರುಕು ಕಾಣಿಸಿಕೊಂಡಿದೆ. ಬಿರುಕಿನ ಅಗಲ ಮಾತ್ರವಲ್ಲದೆ ಉದ್ದ ಕೂಡ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮಂಚಿಕೆರೆ ಕಾಲೋನಿಯ ಡಾಮರು ರಸ್ತೆಯಲ್ಲಿರುವ ಬಿರುಕು ದೊಡ್ಡಾಗಿದ್ದು, ಮಳೆಯ ನೀರು ಹರಿದು ಬಂದು ಈ ಬಿರುಕು ಸೇರುತ್ತಿದೆ.

ಐದು ವರ್ಷಗಳ ಹಿಂದೆ ಈ ಪರಿಸರದ ಹಲವು ಮನೆಗಳ ಗೋಡೆಗಳಲ್ಲಿ ಹಾಗೂ ಬಾವಿಗಳಲ್ಲಿ ಬಿರುಕುಗಳು ಕಂಡುಬಂದಿದ್ದವು. ಆಗ ಶಂಭು ಕುಂದರ್ ಮನೆಯ ಬಾವಿಯಲ್ಲಿ ಬಿರುಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡೀ ಬಾವಿಯನ್ನು ಆ ಸಮಯದಲ್ಲಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಇದೀಗ ಮಂಚಿಕೆರೆಯ ರಮೇಶ್ ನಾಯಕ್ ಎಂಬವರ ಮನೆಯ ಹಾಲ್‌ನ ಗೋಡೆ ಹಾಗೂ ಸಿಟ್‌ಔಟ್‌ನಲ್ಲೂ ಬಿರುಕು ಕಾಣಿಸಿಕೊಂಡಿದೆ. ಬಾವಿಯಲ್ಲಿ ಬಿರುಕು ಇನ್ನಷ್ಟು ಹೆಚ್ಚಾಗಿದೆ.

ಭೂಮಿಯಲ್ಲಿ ಬಿರುಕು ಬಿಟ್ಟ ಪ್ರದೇಶದ ಒಂದು ಭಾಗ ಮೇಲೆ ಇದ್ದು, ಇನ್ನೊಂದು ಭಾಗ ಕೆಳಗೆ ಸಿಂಕ್ ಆಗಿರುವಂತೆ ಗೋಚರಿಸುತ್ತಿದೆ. ಎಲ್ಲ ಕಡೆಗಳಲ್ಲಿ ಬಾವಿ, ಕಂಪೌಂಡ್, ಗೋಡೆ, ಡಾಮರು ರಸ್ತೆ, ಮುರಕಲ್ಲಿನಲ್ಲಿ ಬಿರುಕುಗಳು ಬಿದ್ದಿದ್ದು, ಈ ಬೆಳವಣಿಗೆಯಿಂದ ಇಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇಲ್ಲಿಂದ ಕೆಲವೇ ಮೀಟರ್ ದೂರದಲ್ಲಿ ಪಾಂಡವರ ಗುಹೆ ಇದ್ದು, ಈ ಬಿರುಕು ಆ ಗುಹೆಯವರೆಗೂ ಇರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಮನೆಯ ಗೋಡೆಯಲ್ಲಿ ಬಿಟ್ಟ ಬಿರುಕು ಒಂದು ತಿಂಗಳ ಹಿಂದೆ ಗಮನಕ್ಕೆ ಬಂದಿತ್ತು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಈ ಪರಿಸರದ ಭೂಮಿಯಲ್ಲಿ ಐದು ವರ್ಷಗಳ ಹಿಂದೆ ಕಾಣಿಸಿಕೊಂಡ ಬಿರುಕುಗಳು ದೊಡ್ಡದಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಮನೆಯಲ್ಲಿ ವಾಸ ಮಾಡಲು ಕೂಡ ಭಯವಾಗುತ್ತದೆ’

-ರಮೇಶ್ ನಾಯಕ್ ಮಂಚಿಕೆರೆ

‘2014ರ ಜುಲೈ ತಿಂಗಳಲ್ಲಿ ಮಂಚಿಕೆರೆಯ ಭೂಮಿಯಲ್ಲಿ ಕಾಣಿಸಿಕೊಂಡಿದ್ದ ಬಿರುಕು 2019ರ ಜೂನ್ ತಿಂಗಳಲ್ಲಿ ಹಿರಿದಾಗಿ ವ್ಯಾತ್ಯಾಸ ಕಾಣುತ್ತಿದೆ. ಒಡೆದ ಭೂಮಿಗಳ ಬಂಡೆಗಳ ನಡುವಿನ ಅಂತರ ಹೆಚ್ಚಾಗಿದೆ. ಮಳೆಯಿಂದ ಹರಿದು ಬರುವ ನೀರು ಸಂಪೂರ್ಣವಾಗಿ ಭೂಮಿಯ ಬಿರುಕಿನ ನಡುವೆ ಹರಿದು ಹೋಗುತ್ತಿದೆ. ಬಿರುಕಿನಿಂದ ಉಂಟಾದ ಬಂಡೆಯ ಆಳವನ್ನು ತಿಳಿಯುವುದು ಕಷ್ಟ. ಜಿಲ್ಲಾಡಳಿತ ಇತ್ತ ಗಮನ ಹರಿಸಿ ಈ ಬಗ್ಗೆ ಸಂಶೋಧನೆ ನಡೆಸಿ ಸ್ಥಳೀಯರ ಆತಂಕ ಪರಿಹರಿಸಬೇಕಾಗಿದೆ’

-ಸುಧೀರ್ ನಾಯಕ್, ಸ್ಥಳೀಯರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News