ಪಶ್ಚಿಮಬಂಗಾಳ: ಕರ್ತವ್ಯ ಆರಂಭಿಸಿದ ಕಿರಿಯ ವೈದ್ಯರು

Update: 2019-06-18 16:17 GMT

ಕೋಲ್ಕೊತ್ತಾ, ಜೂ. 18: ಪಶ್ಚಿಮಬಂಗಾಳದ ಸರಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರು ಕರ್ತವ್ಯ ಪುನಾರಂಭಿಸಿದ್ದಾರೆ. ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಕಳೆದ ಒಂದು ವಾರದಿಂದ ದೇಶಾದ್ಯಂತ ವೈದ್ಯರ ಮುಷ್ಕರ ನಡೆದಿತ್ತು. ರಾಜ್ಯದ 14 ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳು ಕಾರ್ಯಾಚರಣೆ ಆರಂಭಿಸಿವೆ. ಇಲ್ಲಿನ ಹೊರರೋಗಿ ವಿಭಾಗ, ರೋಗಶಾಸ್ತ್ರ ವಿಭಾಗ ಹಾಗೂ ಇತರ ವಿಭಾಗಗಳಲ್ಲಿ ಸೇವೆಗಳು ಆರಂಭವಾಗಿವೆ.

ಕಿರಿಯ ವೈದ್ಯರ ಮುಷ್ಕರದ ಕೇಂದ್ರವಾಗಿದ್ದ ನೀಲ್ ರತನ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸಹಿತ ಎಲ್ಲ ಆಸ್ಪತ್ರೆಗಳಲ್ಲಿ ಇಂದು ಚಿಕಿತ್ಸೆಗೆ ಆಗಮಿಸಿದ ರೋಗಿಗಳ ಸಂಖ್ಯೆ ಹೆಚ್ಚಿತ್ತು. ‘‘ನಮ್ಮ ಹೆಚ್ಚಿನ ಸಹೋದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ಹೊರ ರೋಗಿ ವಿಭಾಗದಲ್ಲಿ ನಿಯಮಿತ ಸೇವೆ ನೀಡುವಲ್ಲಿ ಅವರು ಹಿರಿಯ ವೈದ್ಯರಿಗೆ ಸಹಾಯ ನೀಡುತ್ತಿದ್ದಾರೆ.’’ ಎಂದು ಕಿರಿಯ ವೈದ್ಯರ ಜಂಟಿ ವೇದಿಕೆಯ ವಕ್ತಾರ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೋಲ್ಕತ್ತಾಕ್ಕೆ ತೆರಳಿದ್ದ ಹಲವು ಕಿರಿಯ ವೈದ್ಯರು ಇಂದು ಬೆಳಗ್ಗೆ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಗೆ ಮರಳಲು ಸಾಧ್ಯವಾಗಿಲ್ಲ. ಆಸ್ಪತ್ರೆಗೆ ತಲುಪಿದ ಕೂಡಲೇ ಅವರು ಕರ್ತವ್ಯ ಆರಂಭಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ‘‘ಇದು ನಮಗೆ ಒಂದು ರೀತಿಯ ಬಿಡುಗಡೆ. ನಾವು ಬಡವರು ಹಾಗೂ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗೆ ಹೋಗುವುದು ಬಿಟ್ಟರೆ, ನಮಗೆ ಬೇರೆ ಯಾವುದೇ ಆಯ್ಕೆ ಇಲ್ಲ. ಮುಷ್ಕರದಿಂದ ನಮಗೆ ಚಿಕಿತ್ಸೆ ದೊರೆತಿಲ್ಲ. ಮುಷ್ಕರ ರದ್ದುಗೊಳಿಸಿರುವುದರಿಂದ ನಮಗೆ ಸಂತಸ ಉಂಟಾಗಿದೆ’’ ಎಂದು ತನ್ನ ಸಹೋದರನ ಹೃದ್ರೋಗ ಚಿಕಿತ್ಸೆಗೆ ಎನ್‌ಆರ್‌ಎಸ್ ಆಸ್ಪತ್ರೆಗೆ ನಿರಂತರ ಭೇಟಿ ನೀಡುತ್ತಿರುವ ಆರಿಫುಲ್ ಹಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News