​ರಾಜ್ಯ ಸರಕಾರ ಸುಭದ್ರವಾಗಿದೆ: ಆರ್.ವಿ.ದೇಶಪಾಂಡೆ

Update: 2019-06-18 16:19 GMT

ಉಡುಪಿ, ಜೂ.18: ಕುಮಾರಸ್ವಾಮಿ ನಾಯಕತ್ವದಲ್ಲಿ ರಾಜ್ಯ ಸರಕಾರ ಸುಭದ್ರವಾಗಿದೆ. ಈ ಸರಕಾರ ಸರಿಯಾದ ದಿಕ್ಕಿನಲ್ಲಿ ಕಾರ್ಯನಿರ್ವಹಿಸಲು ಮಾಧ್ಯಮಗಳು ಸಹಕರಿಸಬೇಕು. ನಮ್ಮ ತಪ್ಪಿದ್ರೆ ಅದನ್ನು ಎತ್ತಿ ತೋರಿಸಿ. ನಾವು ಸರಿ ಮಾಡಿಕೊಳ್ತೀವಿ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಉಡುಪಿ ಜಿಲ್ಲೆಗೆ ಇಂದು ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವರು ಮಣಿಪಾಲದ ಜಿಪಂ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂರಿಗೆ ಮಾತನಾಡುತಿದ್ದರು.

ಇಂದಿನ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಗೈರುಹಾಜರಾದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ನಾನು ಇಂದು ಇಲ್ಲಿ ಸಭೆ ಇಟ್ಟಿರುವುದು ಗೊತ್ತಿಲ್ಲದೇ, ಅವರ ಇಲಾಖೆಯ ಅಧಿಕಾರಿಗಳು ಬೆಂಗಳೂರಿನಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದಾರೆ. ಹೀಗಾಗಿ ನೀವು ಬರುವುದು ಬೇಡ, ನಾನೇ ಎಲ್ಲವನ್ನು ನಿಭಾಯಿಸುತ್ತೇನೆ ಎಂದು ಅವರಿಗೆ ಹೇಳಿ ಬಂದಿದ್ದೇನೆ ಎಂದರು.

ಆದರೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಇಂಥ ಸಭೆ ಕರೆಯುವುದು ಬೇಡವೇ ಎಂದು ಕೇಳಿದಾಗ ಹೆಣ್ಮಕ್ಕಳ ಮೇಲೆ ಸ್ವಲ್ಪ ಕಾಳಜಿ ಮಾಡ್ರೀ.. ಎಂದು ಪತ್ರಕರ್ತರಿಗೆ ಸಲಹೆ ನೀಡಿದರು.

ಸಿದ್ದರಾಮಯ್ಯರ ಹೊಸದಿಲ್ಲಿ ಪ್ರವಾಸ, ಅಲ್ಲಿ ರಾಹುಲ್‌ಗಾಂಧಿ ಭೇಟಿಯ ಕುರಿತು ಕೇಳಿದಾಗ, ಯಾಕೆ ಸಿದ್ದರಾಮಯ್ಯ ಡೆಲ್ಲಿಗೆ ಹೋಗ್ಬಾರ್ದಾ..!? ರಾಹುಲ್ ಗಾಂಧಿಯವರನ್ನು ಭೇಟಿ ಮಾಡಬಾರದಾ..!? ಸಿದ್ದರಾಮಯ್ಯ ರಾಹುಲ್ ಭೇಟಿಯಾದ್ರೆ ಆಶ್ಚರ್ಯ ಯಾಕೆ..!? ಯಾರ ವಿರುದ್ಧ ಯಾರು ದೂರು ಕೊಡ್ತಾರೆ..!? ಮಾಧ್ಯಮಗಳು ಏನೇನೋ ಮಾತನಾಡೋದಕ್ಕೆ ಹೋಗ್ಬೇಡಿ ನೀವ್ಯಾಕೆ ತಲೆ ಕೆಡಿಸ್ಕೋತೀರಿ? ಎಂದು ಮರು ಪ್ರಶ್ನಿಸಿದರು.

ಜಿಲ್ಲೆಯ ಬರ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಕೇಳಿದಾಗ, ಈ ವರ್ಷ ಮೇಘರಾಜ ಇನ್ನೂ ಜನರ ಮೇಲೆ ಆಶೀರ್ವಾದ ಮಾಡಿಲ್ಲ. ಸರಕಾರ ಮುಂದಾಲೋಚನೆ ಮಾಡಿ ಹಲವು ಕ್ರಮಕೈಗೊಂಡಿದೆ. ಕರಾವಳಿಯಲ್ಲೂ ಈ ಬಾರಿ ಸರಿಯಾಗಿ ಮಳೆ ಬಂದಿಲ್ಲ. ಆರು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಬರ ನಿವಾರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಜಾನುವಾರುಗಳಿಗೂ ಮೇವಿನ ಸಮಸ್ಯೆ ಆಗಬಾರದು. ಯಾರೂ ಗುಳೇ ಹೋಗಬಾರದು ಎಂದು ಸೂಚನೆ ನೀಡಲಾಗಿತ್ತು ಎಂದರು.

ಬರ ನಿರ್ವಹಣೆಗೆ ಸರಕಾರ ಸಾಕಷ್ಟು ಹಣವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ನೆರೆ ಮತ್ತು ಬರ ನಿರ್ವಹಣೆಗೆ ಉಡುಪಿ ಜಿಲ್ಲೆಯೊಂದಕ್ಕೇ ಈಗಾಗಲೇ 24 ಕೋಟಿ ರೂ. ಬಿಡುಗಡೆ ಆಗಿದೆ. ನೀರು ಇಲ್ಲದ ಕಡೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಮೇವಿನ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡದೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವತ್ತಿನ ಸಭೆಯಲ್ಲೂ ಕೆಲವು ಸಲಹೆ ಸೂಚನೆ ಕೊಟ್ಟಿದ್ದೇನೆ. ಅಧಿಕಾರಿಗಳು ಚುರುಕಾಗಬೇಕು, ಜನರ ಬಳಿಗೆ ಹೋಗಿ ಅವರ ಸಮಸ್ಯೆ ಬಗೆಹರಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News