ಅಯೋಧ್ಯೆ ಭಯೋತ್ಪಾದಕ ದಾಳಿ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ, ಓರ್ವನ ಖುಲಾಸೆ

Update: 2019-06-18 16:20 GMT

ಪ್ರಯಾಗ್‌ರಾಜ್, ಜೂ. 18: ಉತ್ತರಪ್ರದೇಶದ ಆಯೋಧ್ಯೆಯಲ್ಲಿ ಭಯೋತ್ಪಾದಕ ದಾಳಿ ನಡೆದ 14 ವರ್ಷಗಳ ಬಳಿಕ ಪ್ರಯಾಗ್‌ರಾಜ್ ವಿಶೇಷ ನ್ಯಾಯಾಲಯ ಪ್ರಕರಣದ ನಾಲ್ವರು ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಓರ್ವನನ್ನು ಖುಲಾಸೆಗೊಳಿಸಿದೆ. ಅಯೋಧ್ಯೆಯಲ್ಲಿರುವ ವಿವಾದಿತ ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ನಿವೇಶನದಲ್ಲಿರುವ ತಾತ್ಕಾಲಿಕ ದೇವಾಲಯದ ಮೇಲೆ 2005 ಜುಲೈಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. ಈ ಘಟನೆ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಅಯೋಧ್ಯೆಯ ಹೊರವಲಯದಿಂದ ಜೀಪು ಬಾಡಿಗೆ ಪಡೆದ ಉಗ್ರರು ಯಾತ್ರಾರ್ಥಿಗಳಂತೆ ಆಗಮಿಸಿದ್ದರು. ಅನಂತರ ಅವರು ಜೀಪನ್ನು ವಿವಾದಿತ ಪ್ರದೇಶದ ಆವರಣದ ಸಮೀಪ ಸ್ಫೋಟಿಸಿದ್ದರು. ಅಲ್ಲದೆ ತಾತ್ಕಾಲಿಕ ದೇವಾಲಯದ ಒಳಗಡೆ ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಿದ್ದರು.

 ಈ ಸಂದರ್ಭ ಭದ್ರತಾ ಪಡೆ ಒಂದು ಗಂಟೆಗಳ ಕಾಲ ಎನ್‌ಕೌಂಟರ್ ನಡೆಸಿ ಐವರು ಉಗ್ರರನ್ನು ಹೊಡೆದುರುಳಿಸಿತ್ತು. ಅನಂತರ ಘಟನೆಯ ತನಿಖೆಯ ಸಂದರ್ಭ ಐವರು ಉಗ್ರರನ್ನು ಬಂಧಿಸಲಾಗಿತ್ತು. ಬಂಧಿತ ಉಗ್ರರ ವಿರುದ್ಧ ಹತ್ಯೆ ಯತ್ನ ಹಾಗೂ ಪಿತೂರಿಯ ಆರೋಪ ದಾಖಲಿಸಲಾಗಿತ್ತು. ಈ ಎನ್‌ಕೌಂಟರ್‌ನಲ್ಲಿ ಸಿಆರ್‌ಪಿಎಫ್‌ನ 7 ಮಂದಿ ಯೋಧರು ಗಾಯಗೊಂಡಿದ್ದರು. ಮೂವರು ಗಂಭೀರ ಗಾಯಗೊಂಡಿದ್ದರು. ಓರ್ವ ಉಗ್ರನನ್ನು ಪಶ್ಚಿಮ ಉತ್ತರಪ್ರದೇಶದ ಶಹರಣ್‌ಪುರದಿಂದ ಬಂಧಿಸಲಾಗಿತ್ತು. ಉಳಿದ ನಾಲ್ವರು ಉಗ್ರರನ್ನು ಜಮ್ಮು ಹಾಗೂ ಕಾಶ್ಮೀರದಿಂದ ಬಂಧಿಸಲಾಗಿತ್ತು.

ನ್ಯಾಯಮೂರ್ತಿಗಳು ನಾಲ್ವರು ದೋಷಿಗಳಿಗೆ ಒಟ್ಟು 2,4 ಲಕ್ಷ ದಂಡ ವಿಧಿಸಿದ್ದಾರೆ. ಓರ್ವ ಆರೋಪಿ ಮುಹಮ್ಮದ್ ಅಝೀಝ್‌ನನ್ನು ಖುಲಾಸೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News